ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟಿ: ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ
ಚಿಕ್ಕಮಗಳೂರು, ಅ.6: ಗ್ರಾಮೀಣ ಜನತೆ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಹಳ್ಳಿಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬೇಕು ಎಂದು ತೇಗೂರು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ಮನವಿ ಮಾಡಿ ದರು. ಗ್ರಾಪಂ ವತಿಯಿಂದ ಹಮ್ಮಿಕೊಂಡಿರುವ 15 ದಿನಗಳ ಕಾಲದ ವಿಶೇಷ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮಕ್ಕೆ ತಾಲೂಕಿನ ತೇಗೂರಿನಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಮೂಲ ಕಾರಣ ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲದಿರುವುದು. ಪ್ರತಿಯೊಬ್ಬರು ತಮ್ಮ ಮನೆಗಳ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಂಡರೆ ಹಳ್ಳಿಗಳು ರೋಗಮುಕ್ತವಾಗುತ್ತವೆ ಎಂದು ಹೇಳಿದರು.
ವಿಶೇಷ ಸ್ವಚ್ಛತಾ ಪಾಕ್ಷಿಕದ ಅಂಗವಾಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ 15 ದಿನಗಳ ಕಾಲ ಪ್ರತಿನಿತ್ಯ ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳುವುದರ ಜೊತೆಗೆ ಸ್ವಚ್ಛತೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಟಿ.ಎನ್. ಲಕ್ಷ್ಮಣರಾಜ್ ಅರಸ್ ಮಾತನಾಡಿ, ಹಳ್ಳಿಗಳ ಸ್ವಚ್ಛತೆಗೆ ಗ್ರಾಪಂ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಕೈಜೋಡಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಬಳಿಕ ಗ್ರಾಪಂ ಪದಾಧಿಕಾರಿಗಳು, ಸದಸ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮದ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣವನ್ನು ಸಾಮೂಹಿಕ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಗ್ರಾಪಂ ಸದಸ್ಯರಾದ ನೇತ್ರಾವತಿ ದೇವರಾಜು, ಹರೀಶ್‌ರಾಜ್, ಕಾರ್ಯದರ್ಶಿ ಶೇಕ್ ಅಹ್ಮದ್, ತೇಗೂರು ಜಗದೀಶ್‌ಅರಸ್ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.