×
Ad

ಡಿಸಿ ಮನವಿಗೆ ಬೆಲೆ ಕೊಡದ ಜಿಪಂ ಸದಸ್ಯರು

Update: 2016-10-06 22:14 IST

ದಾವಣಗೆರೆ, ಅ.6: ಜಿಪಂ ಸದಸ್ಯರ ಶಾಸನಬದ್ಧ ಅನುದಾನದಲ್ಲಿ ಶಾಲೆ ದುರಸ್ತಿ ಕಾಮಗಾರಿಗೆ ಬಳಸುವಂತೆ ಡಿಸಿ ಡಿ.ಎಸ್. ರಮೇಶ್ ಮನವಿ ಮಾಡಿದರೂ, ಜಿಪಂ ಸದಸ್ಯರು ಮಾತ್ರ ಹೈಮಾಸ್ಟ್ ದೀಪಗಳ ಅಳವಡಿಕೆಯೇ ಮುಖ್ಯ ಎಂದು ಪಟ್ಟುಹಿಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಪಂ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜಿಪಂ ಸದಸ್ಯರು, ನಮ್ಮ ಕ್ಷೇತ್ರಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆ ಕುರಿತು ಜನರಿಗೆ ಈಗಾಗಲೇ ಭರವಸೆ ನೀಡಿದ್ದೇವೆ. ಆದ್ದರಿಂದ ಮೊದಲು ಹೈಮಾಸ್ಟ್ ದೀಪ ಅಳವಡಿಕೆಗೆ ಆದ್ಯತೆ ನೀಡುವಂತೆ ದುಂಬಾಲು ಬಿದ್ದರು.

ಪ್ರಸಕ್ತ ಸಾಲಿನಲ್ಲಿ 2.90 ಕೋಟಿ ರೂ. ಶಾಸನಬದ್ಧ ಅನುದಾನವಿದ್ದು, ತಲಾ ಸದಸ್ಯರಿಗೆ 8 ಲಕ್ಷ ರೂ. ಅನುದಾನ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಅನೇಕ ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಆದ್ದರಿಂದ ಜಿಪಂ ಸದಸ್ಯರ ಅನುದಾನದಲ್ಲಿ ಹೆಚ್ಚಿನ ಪಾಲನ್ನು ಶಾಲೆ ದುರಸ್ತಿ, ಮೂಲಸೌಲಭ್ಯಕ್ಕೆ ಬಳಸಬೇಕು ಎಂಬ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರ ಮಾತನ್ನು ಕೇಳದ ಜಿಪಂ ಸದಸ್ಯರು, ಒಂದು ಕ್ಷೇತ್ರಕ್ಕೆ ಕನಿಷ್ಠ ಮೂರು ಹೈಮಾಸ್ಟ್ ದೀಪ ಅಳವಡಿಕೆಗೆ ಅವಕಾಶ ಮಾಡಿಕೊಡುವಂತೆ ಮತ್ತೆ ಮತ್ತೆ ಕೇಳಿಕೊಂಡರು.

ಕೊನೆಗೆ ಜಿಲ್ಲಾಧಿಕಾರಿ ಮಾತನಾಡಿ, ಎಲ್ಲಿ ತೀರಾ ಆವಶ್ಯಕತೆ ಇದೆಯೋ ಅಲ್ಲಿ ದೀ ಅಳವಡಿಕೆಗೆ ಶೇ. 20ರಿಂದ 25ರಷ್ಟು ಅನುದಾನ ಬಳಕೆಗೆ ಅವಕಾಶ ನೀಡಲಾಗುವುದು ಎಂದರು. ಇದಕ್ಕೆ ಒಪ್ಪದ ಜಿಪಂ ಸದಸ್ಯರು, ಇದರಲ್ಲಿ ಒಂದೂ ಹೈಮಾಸ್ಟ್ ದೀಪ ಅಳವಡಿಕೆ ಮಾಡಲೂ ಆಗುವುದಿಲ್ಲ. ಆದ್ದರಿಂದ ಇದನ್ನು ಶೇ. 50ಕ್ಕೆ ಹೆಚ್ಚಿಸುವಂತೆ ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿಗಳು ಈ ಕುರಿತು ಸರಕಾರದ ಗಮನಕ್ಕೆ ತರಲಾಗುವುದು ಎಂದ ಮೇಲೆ ಜಿಪಂ ಸದಸ್ಯರು ಸುಮ್ಮನಾದರು.

ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಪಿ. ವಾಗೀಶ್ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಅಲ್ಲದೆ, ಅನೇಕ ಕಡೆಗಳಲ್ಲಿ ಕೊಠಡಿಗಳ ಕೊರತೆ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಶಾಲಾ ಕೊಠಡಿಗಳನ್ನು ನರೇಗಾದಿಂದ ಮಾಡಿಸುವ ವ್ಯವಸ್ಥೆ ಮಾಡಬೇಕು. ಅಂದಾಗ ಮಾತ್ರ ಎಲ್ಲ ಶಾಲೆಗಳಿಗೆ ಸುಸಜ್ಜಿತ ಕೊಠಡಿ ನೀಡಲು ಸಾಧ್ಯ ಎಂದರು. ಇದಕ್ಕೆ ಎಲ್ಲ ಜಿಪಂ ಸದಸ್ಯರು ಸಮ್ಮತಿ ಸೂಚಿಸಿದರು.

  ಜಿಪಂ ಸದಸ್ಯೆ ಆರುಂಡಿ ಸುವರ್ಣಾ ನಾಗರಾಜ್ ಮಾತನಾಡಿ, ಪಶು ಸಂಗೋಪನೆ ಇಲಾಖೆಯ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಜಿಪಂ ಸದಸ್ಯರ ಶಿಫಾರಸುಗಳನ್ನು ಪರಿಗಣಿಸುತ್ತಿಲ್ಲ. ಆದ್ದರಿಂದ ನಮಗೂ ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಸ್ಥಾನ ನೀಡಿ ಎಂದರು.

ಇದಕ್ಕೆ ಜಿಪಂ ಅಧ್ಯಕ್ಷೆ ಉಮಾ ರಮೇಶ್ ಮಾತನಾಡಿ, ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಆಯಾ ಕ್ಷೇತ್ರದ ಜಿಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿ, ಶಿಫಾರಸು ಪತ್ರಗಳನ್ನು ಗಣನೆಗೆ ತೆಗೆದುಕೊಂಡರೆ ಸೂಕ್ತ ಫಲಾನುಭವಿಗಳ ಆಯ್ಕೆಗೆ ಅವಕಾಶವಾಗುತ್ತದೆ ಎಂದರು.

ಬಾನುವಳ್ಳಿ ಕ್ಷೇತ್ರದ ಬಿ.ಎಂ. ವಾಗೀಶ್‌ಸ್ವಾಮಿ ಮಾತನಾಡಿ, ಮಲೆಬೆನ್ನೂರಿನಲ್ಲಿ ಶಾಲೆಗೆ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದರು. ಈ ಕಾರಣದಿಂದ ಅಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಆದರೆ, ಸ್ಮಾರಕಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಸ್ಮಾರಕಕ್ಕೆ ವಿಶೇಷ ಅನುದಾನದಡಿ ಅಭಿವೃದ್ಧಿಗೊಳಿಸಬೇಕು ಎಂದರು.

ಇದಕ್ಕೆ ಉತ್ತರಿಸಿದ ಪಿ. ವಾಗೀಶ್, ಗಾಂಧೀಜಿ ಸ್ಮಾರಕ ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸ್ಮಾರಕ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಿ ಡಿ.ಎಸ್. ರಮೇಶ್ ಮಾತನಾಡಿ, ಈವರೆಗೆ ಘಟನೋತ್ತರ ಮಂಜೂರಾತಿಯನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ದಸರಾ ಕ್ರೀಡೆಗಳಿಗೆ ಸಂಬಂಧಿಸಿದಂತೆ ನೀಡಿದ್ದು ಬಿಟ್ಟರೆ ಮತ್ತಾವುದಕ್ಕೂ ನೀಡಿಲ್ಲ. ಛೇಂಬರ್ ಸ್ಥಾಪನೆಗೆ ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ಜಿಪಂ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News