×
Ad

ದಲಿತ ನೇತೃತ್ವದ ಹೋರಾಟಕ್ಕೆ ತಾಯಿ ಹೃದಯವಿರುತ್ತದೆ: ಪೀರ್ ಬಾಷಾ

Update: 2016-10-07 17:29 IST

ಚಿಕ್ಕಮಗಳೂರು ಅ.7: ಚಲೋಉಡುಪಿ, ಸ್ವಾಭಿಮಾನಿ ಸಂಘರ್ಷ ಜಾಥಾದ ನಾಲ್ಕನೇ ದಿನವಾದ ಇಂದು ಜಾಥಾವು ಚಿಕ್ಕಮಗಳೂರನ್ನು ಪ್ರವೇಶಿಸಿತು. ಚಿಕ್ಕಮಗಳೂರಿನ ತಾಲೂಕು ಕಛೇರಿಯ ಬಳಿ ಸೇರಿದ್ದ ನೂರಾರು ದಲಿತ ದಮನಿತ ಸ್ವಾಭಿಮಾನಿ ಮನಸ್ಸುಗಳು ಜಾಥಾವನ್ನು ಸ್ವಾಗತಿಸಿ ಎಂ.ಜಿ ರಸ್ತೆಯ ಮುಖಾಂತರ ಮೆರವಣಿಗೆ ಹೊರಟು ಉಡುಪಿ ಚಲೋ, ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಘೋಷಣೆಗಳು ಮೊಳಗಿದವು.. ಆಜಾದ್ ಪಾರ್ಕ್ ಬಳಿ ನಿಂತು ಚಲೋಉಡುಪಿ ಹಾಡನ್ನು ಹಾಡಲಾಯಿತು.

ಮೆರವಣಿಗೆ ಮುಗಿಸಿ ಜಾಥಾವು ಅಂಬೇಡ್ಕರ್ ಭವನ ತಲುಪಿತು. ಚಲೋಉಡುಪಿ ತಂಡದ ಪ್ರೀತಿಗಾಗಿ ಹಾಡುಗಾರರು 'ಭೀಮ ಜ್ಯೋತಿ ಹಿಡಿದುಬನ್ನಿ' 'ಚಲೋ ಉಡುಪಿ' ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಮೊದಲಿಗೆ, ಜಯಮೃತುಂಜಯ ಸ್ವಾಮೀಜಿ ಅವರಿಂದ ತಮಟೆ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು..

ಪ್ರಾಸ್ತಾವಿಕವಾಗಿ ಮಾತನಾಡಿದ ಜನಶಕ್ತಿಯ ಗೌರಿ, ಭಾರತದಾದ್ಯಂತ ಇಂದು ದಲಿತರ ಮೇಲೆ ಹೆಚ್ಚು ಹಲ್ಲೆಗಳು ನಡಿಯುತ್ತಿವೆ. ಇಂದು ಗುಜರಾತ್ ಅನ್ನು ಒಂದು ಮಾದರಿ ರಾಜ್ಯವೆಂಬಂತೆ ಬಿಂಬಿಸಲಾಗುತ್ತಿದೆ, ಆದರೆ ಅದು ಸುಳ್ಳು. ಅಲ್ಲಿ ದಲಿತರ ಮೇಲೆ ಹೀನಾಯವಾಗಿ ಹಲ್ಲೆಗಳು ನಡಿಯುತ್ತಿವೆ.. ಕರ್ನಾಟಕದಲ್ಲೂ ದಲಿತರ ಮೇಲಿನ ಹಲ್ಲೆಗಳು ನಡೆಯುತ್ತಿವೆ. ಹತ್ತಿರದ ಜೈಪುರದಲ್ಲೂ ದಲಿತರ ಮೇಲೆ ಹಲ್ಲೆಗಳು ನಡೆದಿವೆ. ಇದನ್ನೆಲ್ಲಾ ವಿರೋಧಿಸಿ ಏನಾದರೂ ಮಾಡಬೇಕು ಎಂದು ಅನಿಸಿ ಎಲ್ಲಾ ದಲಿತದಮನಿತ ಮನಸ್ಸುಗಳು ಸೇರಿಕೊಂಡು ಫ್ರೀಡಂ ಪಾರ್ಕ್ ನಲ್ಲಿ ಸಭೆ ಸೇರಿ ಚರ್ಚಿಸಿ ಇಂದು ಚಲೋ ಉಡುಪಿ, ಸ್ವಾಭಿಮಾನಿ ಸಂಘರ್ಷ ಜಾಥಾ ರೂಪುಗೊಂಡಿದೆ. ಇದಕ್ಕೆ ಒಂದೇ ಬಣ್ಣ ಮತ್ತು ಲಾಂಛನ ಮಾಡಿಕೊಂಡಿದೆ. ಅದು ನೀಲಿ ಮತ್ತು ಅಂಬೇಡ್ಕರ್.. ಇದಕ್ಕೆ ಹಲವಾರು ಸಂಘಟನೆಗಳು ತಮ್ಮ ಐಡೆಂಟಿಟಿ ಪಕಕ್ಕೆ ಇಟ್ಟು ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ರೂಪಿಸಿದೆ. 'ಆಹಾರ ನಮ್ಮ ಆಯ್ಕೆ' ಮತ್ತು ಭೂಮಿ ಎಲ್ಲರ ಘನತೆಯ ಸಂಕೇತ ಹಾಗಾಗಿ 'ಭೂಮಿ ನಮ್ಮ ಹಕ್ಕು' ಎನ್ನುವ ಎರಡು ಘೋಷಣೆ ಜೊತೆ ಹೊರಟ್ಟಿದ್ದಿವಿ.. ಇದರ ಜೊತೆ ಮಹಿಳಾ, ಅಲ್ಪಸಂಖ್ಯಾತ, ಲೈಂಗಿಕ ಅಲ್ಪಸಂಖ್ಯಾತ, ಆದಿವಾಸಿ ಸಂಘಟನೆಗಳು ಜೊತೆಗಿವೆ. ನೀವು ಬನ್ನಿ ಎಂದರು.

ಪಂಚಮಸಾಲಿ ಮಠ ಕೂಡಲಸಂಗಮದ, ಜಯಮೃತುಂಜಯ ಸ್ವಾಮೀಜಿ ಮಾತನಾಡಿ, ಇಂದು ನಾವು ಬುದ್ಧ, ಬಸವ, ಅಂಬೇಡ್ಕರ್  ಆಶಯಗಳನ್ನು ನೆನಸಿಕೊಳ್ಳಬೇಕು. ಈ ಚಲೋಉಡುಪಿ ಹೋರಾಟ ಕಿಚ್ಚು ಭಾರತದ ಎಲ್ಲರಿಗೂ ಆಶಯವಾಗಲಿದೆ. ಭಾರತದ ಮೂಲ ನಿವಾಸಿಗಳು ದಲಿತರು, ಹಸು ಸಾಕಿದ್ದು, ಭೂಮಿ ಕೃಷಿ ಮಾಡಿದ್ದು ದಲಿತರು. ಆದ್ರೆ ಹಸುವನ್ನು ಮುಟ್ಟದ, ಕೃಷಿ ಮಾಡದ ಒಂದು ಸಮುದಾಯ ನಮ್ಮ ಮೇಲೆ ದಮನ ಮಾಡುತ್ತಿವೆ. ಇವರು ವಿದೇಶಿಗರು, ದಲಿತರು ಮೂಲ ನಿವಾಸಿಗಳು. ಭಯೋತ್ಪಾದನೆಗೆ ಸರಿ ಸಮಾನದ ಕೆಲಸವನ್ನು ಈ ವಿದೇಶಿ ಸಮುದಾಯಗಳು ಮಾಡುತ್ತಿವೆ, ಇದನ್ನು ನಾವು ವಿರೋಧಿಸಬೇಕು. ಜಾಗತಿಕ ಮಟ್ಟದಲ್ಲಿ ಇರುವ ಭಯೋತ್ಪಾದನೆ ಬಹಿರಂಗವಾದದ್ದು.. ನಮ್ಮ ದೇಶದಲ್ಲಿ ಇರುವ ವಿದೇಶಿಗರು ಮಾಡುತ್ತಿರುವುದು ಅಂತರಂಗ ಭಹೊತ್ಪಾದನೆ. ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಕನಕ, ಬುದ್ಧರು, ಹೇಳಿದ ಭಾರತ ನಮಗೆ ಬೇಕಾಗಿದೆ. ನಿಮ್ಮ ಮನುವಾದದ ಭಾರತ ನಮಗೆ ಬೇಕಾಗಿಲ್ಲ. ಇವತ್ತು ನಮಗೆ ರಾಜಕೀಯ ಸ್ವತಂತ್ರ ಸಿಕ್ಕಿದೆ ಅಷ್ಟೇ, ಆದರೆ ನಮಗೆ ದಲಿತರ ಸ್ವಾತಂತ್ರ್ಯದ ಭಾರತ ಬೇಕಾಗಿದೆ.. ಆ ರೀತಿಯ ನಮ್ಮ ಸ್ವಾತಂತ್ರಕ್ಕಾಗಿ ಎರಡನೆ ಸ್ವತಂತ್ರ ಸಂಗ್ರಾಮಕ್ಕೆ ಸಜ್ಜಾಗಬೇಕಿದೆ.

ಇವತ್ತು ಕರಾವಳಿ ಪ್ರದೇಶದಲ್ಲಿ ಎಲ್ಲಾರು ಕೂಡಿ ಬಾಳುವಂತ ವ್ಯವಸ್ಥೆ ಇಲ್ಲದಂತಾಗಿದೆ, ಸ್ವತಂತ್ರವಾಗಿ ಪ್ರೀತಿ ಮಾಡಲು ಕೂಡಿ ಬಾಳಲು ಅವಕಾಶ ಇಲ್ಲದಂತೆ ಆಗಿದೆ, ತಂದೆ ಮಗಳು ಅಣ್ಣ ತಂಗಿ ಜೊತೆಗೆ ಓಡಾಡಲು ಸಾಧ್ಯವಿರದ ಹಾಗೆ ವಾತಾವರಣ ಸೃಷ್ಠಿಯಾಗಿದೆ.. ಆ ದೃಷ್ಟಿಯಲ್ಲಿ ನಮ್ಮ ಆಹಾರ ನಮ್ಮ ಆಯ್ಕೆ, ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಅತ್ಯಂತ ಮಹತ್ವವಾದದ್ದು.  ಇಂದು ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುತ್ತಿರುವುದು ವೈದಿಕ ಧರ್ಮದ ಮೇಲು ಜಾತಿಯ ಜನರೇ ಆಗಿದ್ದಾರೆ.  ಹಾಗಾದರೆ ಇದು ನ್ಯಾಯವೇ? ಆಹಾರದ ವಿಚಾರ ಇಟ್ಟು ಮನುಷ್ಯನಿಗೆ ಕೀಳಾಗಿ ನೋಡುವ ರೀತಿ ಖಂಡನೀಯ. ಈ ಜನಕ್ಕೆ ನಮ್ಮ ನೆಲದ ಸಮಸ್ಯೆ ಬಗ್ಗೆ ಕಾಳಜಿ ಇಲ್ಲ.. ಜನರಿಗೆ ಸಂಬಂಧಪಡದ ವಿಷಯಗಳಿಗೆ ಪ್ರತಿಭಟನೆ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು ಎಂದು ವೈದಿಕ ಮೇಲು ಜಾತಿ ಅವರು ಕೇಳಲು ಸಾಧ್ಯವೇ? ಇಲ್ಲ ಇದನ್ನು ನಾವೇ ಹೋರಾಟ ಮಾಡಿ ಕೇಳಬೇಕಿದೆ.  ಹಾಗಾಗಿ ಈ ಜಾಥಕ್ಕೆ ನಾವು ಬೆಂಬಲ ಸೂಚಿಸೋಣ. ಹಿಂದೂ ಪ್ರಯೋಗಾಲಯ ಆಗಿರುವ ಉಡುಪಿಗೆ ನಾವು ಹೋಗೋಣ. ಇದು ಉಡುಪಿಗೆ ನಿಲ್ಲದಿರಲಿ. ಎಂದು ಹೇಳಿ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಶಕ್ತಿ ಕರಗಿಸುವ ಪ್ರಯತ್ನದ ವಿರುದ್ಧ ಹೋರಾಟ ಮಾಡೋಣ ಎಂದು ಕರೆ ಕೊಟ್ಟರು..

ಬರಹಗಾರರಾದ ಪೀರ್ ಬಾಷಾ ಮಾತನಾಡಿ,  ಈ ದಿನ ಒಂದು ಚಾರತ್ರಿಕ ವಾದ ಜಾಥಾ ನಡೆಯುತ್ತಿದೆ. ನಾವು ಬೀದಿಗಳಲ್ಲಿ ಅಭಿಮಾನದ ನೇಗಿಲಿಂದ ಬಂಜರು ನೆಲ ಉತ್ತವನೆ, ಪಾತಿ ಮಾಡಿ ನಾಟಿ ಹಾಕಿ, ಬೆಳೆಯ ಕಾಣದೆ ಹೋದವನೇ ಎಂದು ಹಾಡು ಹೇಳುತ್ತಿದ್ದೆವು. ಇವತ್ತು ಆ ರೀತಿಯ ಹೊಸ ಬೆಳೆ ಚಿಗುರುತ್ತಿದೆ. ಇದು ಆಶಾದಾಯಕವಾಗಿದೆ. ಇವತ್ತು ಹಿಂದುತ್ವ ಹಿಂದೂ ರಾಷ್ಟ್ರೀಯ ದೇಶ ಕಟ್ಟಲು ಹೊರಟಿದೆ. ಹಿಟ್ಲರ್ ಇದೆ ರೀತಿಯಲ್ಲಿ ಕಟ್ಟಲು ಹೋಗಿ ಮಾಡಿದ ದುರಂತ ನಮ್ಮ ಮುಂದೆ ಇದೆ.  ಇದರ ಅಪಾಯವನ್ನು ನಾವು ಅರ್ಥ ಮಾಡಕೊಳ್ಳಬೇಕು. ಇಂದಿನ ಪತ್ರಿಕೆ ಓದಿ ನೋಡಿ, ರೋಹಿತ್ ವೇಮುಲ ದಲಿತ ಅಲ್ಲ ಎನ್ನುವ ಒಂದು ವರದಿ ಇದ್ರೆ ಇನ್ನೊಂದು ವರದಿ ಹೀಗಿದೆ ದಾದ್ರಿಯಲ್ಲಿ ಆಖ್ಲಾಕ್ ಅನ್ನು ಕೊಂದು ಜೈಲಿನಲ್ಲಿ ಸತ್ತ ರವಿ ಅನ್ನುವ ಅಪರಾಧಿಯನ್ನು ದೇಶದ ತ್ರಿವರ್ಣ ಧ್ವಜ ಹೊದಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಇದು ನಿಜಕ್ಕೂ ದುರಂತ. ಈ ದೇಶದಲ್ಲಿ ರೈತರ ಆತ್ಮಹತ್ಯೆ ಅಂತಹ ನೂರಾರು ಸಮಸ್ಯೆ ಇದ್ದರೂ ನಮ್ಮ ಪ್ರಧಾನಿ ಮಹಾ ಮೌನಕ್ಕೆ ಜಾರಿದ್ದಾರೆ.

ಗಾಂಧೀಜಿ ಅವರನ್ನು ಸ್ವಚ್ಛ ಭಾರತ ಅಭಿಯಾನದಿಂದ ಅವರನ್ನು ಕಸದ ಪೊರಕೆಗೆ ಸಮೀಕರಿಸಿ ಗಾಂಧಿ ಅವರ ಸೌಹಾರ್ದದ ಮೌಲ್ಯವನ್ನು ನಗಣ್ಯ ಮಾಡಲಾಗುತ್ತಿದೆ. ಇಂದು ಉನಾದಿಂದ ಉಡುಪಿ ಚಲೋವರೆಗೂ ಹುಟ್ಟಿಕೊಂಡಿರುವ ಈ ಹೋರಾಟದ ಕೂಗು ಪಾರ್ಲಿಮೆಂಟ್ ನ ಉತ್ತರವಾಗಿ ಬರಬೇಕು. ಈ ರೀತಿಯ ಹೋರಾಟ ದಶಕಗಳ ಹಿಂದೆಯೇ ಬರಬೇಕಿತ್ತು. ಹಾಗೆ ಬಂದಿದ್ದರೆ ಇಂದು ಕೇಂದ್ರದಲ್ಲಿ ಈ ಕೆಟ್ಟ ಸರಕಾರ ಇರುತ್ತಿರಲಿಲ್ಲ. ಭಾರತದಲ್ಲಿ ಅತಿ ಶೋಷಿತರು ದಲಿತರೇ ಆಗಿರುವ ಕಾರಣ ನಾವೆಲ್ಲ ದಲಿತರ ನಾಯಕತ್ವದಲ್ಲಿ ಹೋರಾಟ ನಿರ್ಮಿಸಬೇಕಿದೆ. ಭಾರತದಲ್ಲಿ ಸಮಾನತೆಯ ಕ್ರಾಂತಿ ಎರಡು ಕಾಲಿನ ನಡಿಗೆಯಿಂದ ಸಾಧ್ಯವಿಲ್ಲ (ರೈತ, ಕಾರ್ಮಿಕ). ಈ ದೇಶದಲ್ಲಿ ಸಮಾನತೆಯ ಕ್ರಾಂತಿ ಸಾಧ್ಯವಾಗಬೇಕಾದರೆ ಅವಮಾನಿತರಾದ ದಲಿತರು, ಅನುಮಾನಿತರಾದ ಮುಸಲ್ಮಾನರು, ಅಬಲೆಯರಾದ ಮಹಿಳೆಯರು, ಅಸಹಾಯಕರಾದ ರೈತರು ಎಂಬ ನಾಲ್ಕು ಕಾಲಿನ ದೇಹದಿಂದ (ಹೋರಾಟ) ಸಾಧ್ಯ.

ದಲಿತ ನೇತೃತ್ವದ ಹೋರಾಟಕ್ಕೆ ತಾಯಿ ಹೃದಯವಿರುತ್ತದೆ. ಹಾಗಾಗಿ ನಾನು ದಲಿತ ನೇತೃತ್ವದ ಹೋರಾಟದ ಹಿಂದೆ ಬರುತ್ತೇನೆ ಅಂದರು. ಕಡೆಯಲ್ಲಿ "ನಾನು ಗೋವು, ತಿಂದು ಗೋವಿನಂತೆ ಆಗಿದ್ದೇನೆ. ಗೋವು ತಿಂದು ನನ್ನ ರೋಮ ರೋಮಗಳಲ್ಲಿ ಕೆಚ್ಚಲು ತುಂಬಿಕೊಂಡು ಹಸಿದ ಕಂದಮ್ಮಗಳಿಗೆ ಹಾಲುಣಿಸುತ್ತೇನೆ. ನಾನು ಗೋವು ತಿಂದು ಗೋವಿನಂತೆ ಆಗಿದ್ದೇನೆ, ಅನ್ನ ತಿಂದು ನಿಮ್ಮಂತೆ ಆಗಲಾರೆ" ಎಂಬ ಎನ್.ಕೆ. ಹನುಮಂತಯ್ಯ ಸಾಲುಗಳನ್ನು ಹೇಳಿ ಮಾತು ಮುಗಿಸಿದರು.

ಕಾರ್ಯಕ್ರಮದಲ್ಲಿ ಕೆ.ಟಿ. ರಾಧಾಕೃಷ್ಣ, ಕಾಂ.ರುದ್ರಯ್ಯ, ಸಿಪಿಐ ಮುಖಂಡರಾದ ಅಂಜಾದ್, ಆಪ್ ನ ಡಾ. ಸುಂದ್ರೇ ಗೌಡ, ಡಿಪಿಎಸ್ ನ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor