ಬಗರ್‌ಹುಕುಂ ಸಾಗುವಳಿದಾರರ ಮೂಲ ದಾಖಲೆ ಮಾಯ: ಶಾಸಕ ದತ್ತ
ಕಡೂರು, ಅ.7: ಇಂದಿನ ಬಗರ್‌ಹುಕುಂ ಸಮಿತಿಯಲ್ಲಿ ಸಾಗುವಳಿದಾರರ ದಾಖಲೆಗಳನ್ನು ಪರಿಶೀಲಿಸಿದಾಗ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆೆ. ಬಡರೈತರು ಬಗರ್‌ಹುಕುಂ ಸಾಗುವಳಿಗಾಗಿ ಫಾರಂ 50 ಮತ್ತು 53 ರಲ್ಲಿ ಅರ್ಜಿ ಹಾಕಿ 1991ರಿಂದಲೂ ಕಾಯುತ್ತಿದ್ದಾರೆ. ಆದರೆ ಮೂಲ ದಾಖಲೆಗಳ ಲಭ್ಯತೆ ಇಲ್ಲದಾಗಿದೆ. ಇವುಗಳು ಎಲ್ಲಿ, ಹೇಗೆ ಮಾಯವಾಗಿವೆ ಎಂಬುದು ಗೊತ್ತಿಲ್ಲದಾಗಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕರೆಯಲಾಗಿದ್ದ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ದಾಖಲೆಗಳು ಕಳೆದ 30 ವರ್ಷಗಳ ಹಿಂದೆ ನಾಶವಾಗಿದ್ದು, ಅದರ ಬಗ್ಗೆ ಮಾಹಿತಿ ಇಲ್ಲ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂಬುದರ ಬಗ್ಗೆ ತಿಳಿಯದಾಗಿದೆ. ಇದು ಆಗಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನವಾಗಿದೆ. ಈಗಿನ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡುತ್ತಿದ್ದು, ಕಮಿಟಿಯ ಸದಸ್ಯರಲ್ಲಿ ಏನಾದರೂ ಮಾಡಬಹುದು ಎಂಬುದರ ಬಗ್ಗೆ ಹುಮ್ಮಸ್ಸಿದೆ ಎಂದು ಹೇಳಿದರು. ಹೊಸದಾಗಿ ದಾಖಲೆ ಮಾಡಲು ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ಸರ್ವೇಯರ್‌ಗಳನ್ನು ಬಳಕೆ ಮಾಡಿಕೊಂಡು ಸರ್ವೇ ಸ್ಕೆಚ್ ನೀಡಲು ಒಂದು ತಿಂಗಳ ಗಡುವು ನೀಡಲಾಗಿದೆ. ಫಾರಂ.53ರ ಅಡಿಯಲ್ಲಿ 14,800 ಅರ್ಜಿಗಳು ಬಂದಿದ್ದು, ಮಂಜೂರಾತಿಯಾಗಿರುವುದು ಕೇವಲ 617. ಫಾರಂ.50ರಡಿಯಲ್ಲಿ 13,921 ಅರ್ಜಿಗಳು ಬಂದಿದ್ದು, ಮಂಜೂರಾತಿ ದೊರಕಿರುವುದು 4,028 ಮಾತ್ರ. ಮುಂದೆ ಸಾಗುವಳಿ ನೀಡಲು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡಲು 15 ದಿನಗಳ ಸಮಯ ನೀಡಲಾಗಿದೆ. ಗೋಮಾಳ, ಹುಲ್ಲುಬನಿ ಜಮೀನಿನ ಬಗರ್‌ಹುಕುಂ ಸಾಗುವಳಿದಾರರು ಬಡವರಾಗಿದ್ದರೆ ಸಾಗುವಳಿ ಚೀಟಿ ನೀಡಲು ಸರಕಾರ ಹೊಸ ಸುತ್ತೋಲೆ ಹೊರಡಿಸಿದೆ. ಇವರಿಗೆ ಸಾಗುವಳಿ ಚೀಟಿ ನೀಡಬಹುದಾಗಿದೆ ಎಂದು ತಿಳಿಸಿದರು. ಹಿಂದಿನವರ ತಪ್ಪಿನಿಂದಾಗಿ ಕೆಲವು ಕಡೆಗಳಲ್ಲಿ ಕಂದಾಯ ಭೂಮಿ ಅರಣ್ಯ ಭೂಮಿ ಎಂದಾಗಿದೆ. ಇದನ್ನು ಮಾರ್ಪಾಡು ಮಾಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು, ಈ ತಿಂಗಳ 17ರ ಒಳಗೆ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕಿದೆ. ಡಿಸೆಂಬರ್ ತಿಂಗಳ ಒಳಗಾಗಿ ಸಾಗುವಳಿದಾರರಿಗೆ ಚೀಟಿ ನೀಡಲಾಗುವುದು. ಅರ್ಜಿದಾರರಿಗೆ ಹೆಚ್ಚಿನ ಜಮೀನು ಇದ್ದರೆ ಅಂತವರ ಅರ್ಜಿಗಳನ್ನು ವಜಾಗೊಳಿಸಲಾಗುವುದು. ಇಂತಹ ಪ್ರಕರಣಗಳು 64 ಇದ್ದು, ಅವರ ಅರ್ಜಿ ವಜಾಗೊಳಿಸಲಾಗಿದೆ. ಅತೀ ಕಡುಬಡವರ ಅರ್ಜಿಗಳನ್ನು ಪರಿಶೀಲಿಸಿ ಸಾಗುವಳಿ ಚೀಟಿ ನೀಡಲಾಗುವುದು. ಮುಂದಿನ ಬಗರ್‌ಹುಕುಂ ಸಭೆಯನ್ನು ಇದೇ ತಿಂಗಳ 22ಕ್ಕೆ ಕರೆಯಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್ ಭಾಗ್ಯಾ, ಸಮಿತಿ ಸದಸ್ಯರಾದ ಪುಷ್ಪಾ ಕಾಂತರಾಜ್, ನಾಗರಾಜ್, ತಿಮ್ಮೇಗೌಡ ಹಾಗೂ ಸಂಬಂಧಿಸಿದ ಎಲ್ಲ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.