ಹಿರಿಯರ ಮಾರ್ಗದರ್ಶನದಂತೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹಕ್ರೆ ಕರೆ

Update: 2016-10-07 16:52 GMT

ಸಾಗರ, ಅ.7: ಸಮಾಜದಲ್ಲಿ ಹಿರಿಯರನ್ನು ಎಲ್ಲರೂ ಗೌರವದಿಂದ ಕಾಣುವಂತಾಗಬೇಕು. ಜೊತೆಗೆ ಅವರಿಂದ ಒಳ್ಳೆಯ ಮಾರ್ಗದರ್ಶನ ಪಡೆದುಕೊಂಡು ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಯುವ ಸಮೂಹ ಮುಂದಾಗಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದರು. ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನೌಕರರ ಸಂಘ ಮತ್ತು ಎನ್‌ಸಿಡಿ ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಹಿರಿಯ ನಾಗರಿಕರಲ್ಲಿ ಶಿಕ್ಷಣ ಕಡಿಮೆ ಇರಬಹುದು. ಆದರೆ, ಅವರ ಜೀವನಾನುಭವ ಅಗಾಧವಾದುದು. ಅಂಥವರ ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯ. ಕೆಲವರು ವಯಸ್ಸಿನಲ್ಲಿ ಹಿರಿಯರಾಗಿದ್ದರೂ ಮನಸ್ಸು, ಬುದ್ಧಿ ಯೌವ್ವನದಿಂದ ಕೂಡಿ ರುತ್ತದೆ. ಕೆಲಸದಿಂದ ನಿವೃತ್ತಿಗೊಂಡಿದ್ದರೂ ಕ್ರಿಯಾಶೀಲರಾಗಿರುತ್ತಾರೆ ಎಂದರು.

ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯ ಕುರಿತು ಅರಿವು ಮೂಡಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ. ಅಚ್ಯುತ್ ಹಾಗೂ ಹಿರಿಯ ಸರ್ಜನ್ ಡಾ.ಕೆ.ಆರ್. ಪ್ರಕಾಶ್ ಬೋಸ್ಲೆ ಅವರು ರಕ್ತದೊತ್ತಡ ಮತ್ತು ಮಧುಮೇಹ ಕುರಿತು ಉಪಯುಕ್ತ ಮಾಹಿತಿ ನೀಡಿದರು. ತಾಲೂಕು ಅಧ್ಯಕ್ಷ ವೈ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ದೇವಿಕಮ್ಮ ಮತ್ತು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅವರನ್ನು ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ಆಸ್ಪತ್ರೆ ನಿವೃತ್ತ ನೌಕರ ವೆಂಕಟಸ್ವಾಮಿ ಅವರನ್ನು ಸ್ಮರಿಸಿ ಅವರ ಕುಟುಂಬಕ್ಕೆ ರೂ. 10 ಸಾವಿರ ಸಹಾಯಧನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News