×
Ad

ದನದ ಹೆಸರಲ್ಲಿ ನನ್ನ ಮಗನನ್ನು ಕೊಂದಿದ್ದು ಹಿಂದೂ ಸಂಘಟನೆಯ ರೌಡಿಗಳು: ಪ್ರವೀಣ್ ಪೂಜಾರಿ ತಾಯಿ

Update: 2016-10-08 14:03 IST

ಉಡುಪಿ, ಅ.8: ಕೆಂಜೂರಿನ ಪ್ರವೀಣ್ ಪೂಜಾರಿಯ ಮನೆಗೆ ಭೇಟಿ ಕೊಟ್ಟ ಚಲೋ ಉಡುಪಿ ತಂಡದ ಜೊತೆ ಮಾತನಾಡಿದ ಪ್ರವೀಣ್ ಪೂಜಾರಿಯ ತಾಯಿ ಬೇಬಿ ಅವರು, ನನ್ನ ಮಗ ಯಾರಿಗೂ ಅನ್ಯಾಯ ಮಾಡಿದವನಲ್ಲ, ಎಲ್ಲರಿಗೂ ಉಪಕಾರ ಮಾಡುತ್ತಿದ್ದ. ಕೋಳಿ ಫಾರಂ ಮತ್ತು ಗಾಡಿ ಇಟ್ಟುಕೊಂಡು ಬಾಡಿಗೆಗೆ ಹೋಗಿ ಜೀವನ ನಡೆಸುತ್ತಿದ್ದ. ದನದ ಹೆಸರಲ್ಲಿ ನನ್ನ ಮಗನನ್ನು ಆ ರೌಡಿಗಳು ಕೊಂದರು. ನಾನು ಸಾಲ ಮಾಡಿ ದನ ಸಾಕುತ್ತಿದ್ದೇನೆ. ದನದ ಬಗ್ಗೆ ಅವರಿಗೇನು ಗೊತ್ತು, ಅವರು ರೌಡಿಗಳು ಕಣ್ಣೀರಿಟ್ಟರು.

''ನಾನು ಬಾಡಿಗೆಗೆ ಬಂದವನು ವ್ಯಾಪಾರಿ ಅಲ್ಲ, ಬೇಕಾದ್ರೆ ಪೋಲಿಸರಿಗೆ ಒಪ್ಪಿಸಿ ಸತ್ಯ ಏನೆಂದು ಗೊತ್ತಾಗುತ್ತದೆ'' ಎಂದು ಅಂಗಲಾಚಿದರೂ, ರಾಕ್ಷರಂತೆ ಹೊಡೆದು ಕೊಂದಿದ್ದಾರೆ. ಅವರಿಗೆ ಮನುಷ್ಯರಿಗಿಂತ ದನ ಮುಖ್ಯ ಆಯ್ತು. ನಮ್ಮ ಭಾಗದಲ್ಲಿ ಎಲ್ಲಿ ನೋಡಿದರೂ ಹುಡುಗ ಹುಡುಗಿಯರ ಕೊಲೆ ನಡೀತಿದೆ. ಅವರಿಗೆ ಮನುಷ್ಯತ್ವ ಇಲ್ಲ.ಪ್ರವೀಣ್ ಗೆ ಮದುವೆ ಮಾಡುವುದಕ್ಕೆ ಹುಡುಗಿ ಹುಡುಕುತ್ತಿದ್ದೆವು. ತಂಗಿ ಮದುವೆಗೆ ಮಾಡಿದ್ದು ಇನ್ನು ಸಾಲ ತೀರಿಲ್ಲ. ಅವನಿಂದಲೇ ನಮ್ಮ ಮನೆ ನಡೀತಿತ್ತು. ಅವನು ಯಾರ ಸಹವಾಸಕ್ಕೂ ಹೋಗದೆ ನಮ್ಮ ಸಂಸಾರ ನೋಡಿಕೊಳ್ಳುತ್ತಿದ್ದ. ಅಂಥಾ ಮಗನನ್ನು ಅವರು ಕೊಂದರು. ನನ್ನ ಕಷ್ಟ ಯಾವ ತಾಯಿಗೂ ಬರುವುದು ಬೇಡ. ನನ್ನ ಅಳು ಈಗಲೂ ನಿಂತಿಲ್ಲ. ನಾಳೆ ನಿಮ್ಮ ಕಾರ್ಯಕ್ರಮಕ್ಕೆ ಬಂದು ನಾನು ಮಾತನಾಡುತ್ತೇನೆ ಎಂದು ಮಗನನ್ನು ನೆನಪಿಸಿಕೊಂಡು ಅವರು  ಕಣ್ಣೀರಿಟ್ಟರು.

ಈ ವೇಳೆ ಸಾಂತ್ವನ ಹೇಳಿದ ಚಲೋ ಉಡುಪಿ ತಂಡದ ಸದಸ್ಯರು, ಈ ಅನ್ಯಾಯವನ್ನು ನಾವು ತುಂಬಿ ಕೊಡಲು ಸಾಧ್ಯವಿಲ್ಲ, ನಿಮ್ಮ ಮಗನಂತೆಯೇ ಸಾವಿರಾರು ತಾಯಿಂದರ ಮಕ್ಕಳ ಹಲ್ಲೆ,ಕೊಲೆಗಳು ನಡೆದಿವೆ ಈ ದೇಶದಲ್ಲಿ. ಆದರೆ ಮುಂದೆ ಇಂತಹ ದೌರ್ಜನ್ಯಗಳು ನಡೆಯದಂತೆ  ಖಂಡಿಸಲು, ಯುವಕ ಯುವತಿಯರಲ್ಲಿ ಜಾಗೃತಿ ಮೂಡಿಸಲು, ಅನ್ಯಾಯಕ್ಕೆ ಒಳಗಾದವರಿಗೆ ಸಾದ್ಯವಾದಷ್ಟು ನ್ಯಾಯ ಕೊಡಿಸಲು, ನಾವು ಬೆಂಗಳೂರಿನಿಂದ ಜಾಥಾ ಹೊರಟು, ಉಡುಪಿಗೆ ಬಂದಿದ್ದೇವೆ. ನಿಮ್ಮ ಮಗನಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಡುತ್ತೇವೆ, ನಿಮ್ಮ ಜತೆ ನಾವು ಇದ್ದೇವೆ ಎಂದು  ಪ್ರವೀಣ್ ಅವರ ತಾಯಿಗೆ ಧೈರ್ಯ ಹೇಳಿದರು.  ನೀವು ನಾಳೆ ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor