ಬಿಬಿಎಂಪಿ ವಿಭಜಿಸುತ್ತೇವೆ: ಸಿಎಂ ಘೋಷಣೆ
ಬೆಂಗಳೂರು, ಅ.8: ‘‘ನಮ್ಮ ಸರಕಾರದ ಅವಧಿಯಲ್ಲೇ ಬಿಬಿಎಂಪಿಯನ್ನು ವಿಭಜಿಸುತ್ತೇವೆ. ಪಾಲಿಕೆಯನ್ನು 3ರಿಂದ 4 ವಿಭಾಗ ಮಾಡಲಾಗುವುದು. ವಿಭಜನೆಗೆ ವಿರೋಧ ವ್ಯಕ್ತವಾದ ಕಾರಣ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’’ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘‘ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದ್ದು,ಸುಮಾರು 1 ಕೋಟಿ ಜನರಿದ್ದಾರೆ. 55 ಲಕ್ಷಕ್ಕೂ ಅಧಿಕ ವಾಹನಗಳಿವೆ. ಕೇವಲ ಒಬ್ಬ ಮೇಯರ್‌ನಿಂದ ಎಲ್ಲವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರದ ವಿಕೇಂದ್ರಿಕರಣದ ಅಗತ್ಯವಿದೆ’’ ಎಂದು ಸಿಎಂ ಒತ್ತಿ ಹೇಳಿದರು.
ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ‘‘ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಆಸ್ತಿಯನ್ನು ಅಡವಿಟ್ಟಿರುವುದು, ಕಸ ವಿಲೇವಾರಿ ಸಮಸ್ಯೆ ಉಂಟು ಮಾಡಿರುವುದೇ ದೊಡ್ಡ ಸಾಧನೆಯಾಗಿತ್ತು. ಅಧಿಕಾರದಲ್ಲಿಷ್ಟು ದಿನ ಹಣವನ್ನು ನುಂಗಿಹಾಕಿತ್ತು’’ ಎಂದು ಆರೋಪಿಸಿದ್ದಾರೆ.
ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ‘‘ಎಷ್ಟೇ ಪ್ರಭಾವಿಗಳಿದ್ದರೂ ಸರಕಾರಿ ಭೂಮಿಯನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುತ್ತದೆ’’ ಎಂದು ಎಚ್ಚರಿಸಿದರು.