ಅರ್ಹರ ಆಯ್ಕೆಗೆ ಸಲಹಾ ಸಮಿತಿ ರಚನೆ

Update: 2016-10-08 13:58 GMT

ಬೆಂಗಳೂರು, ಅ. 8: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ 14 ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ.

ಡಾ.ಅಂಬಳಿಕೆ ಹಿರಿಯಣ್ಣ-ಜಾನಪದ ಕ್ಷೇತ್ರ, ಡಾ.ನಾರಾಯಣಗೌಡ-ಕೃಷಿ ಕ್ಷೇತ್ರ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮೀನಾಕ್ಷಿ ಬಾಳಿ, ಕೆ.ಬಿ.ಸಿದ್ದಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್, ಡಾ.ರಹಮತ್ ತರೀಕೆರೆ ಸಾಹಿತ್ಯ ಕ್ಷೇತ್ರದಿಂದ ಸದಸ್ಯರನ್ನಾಗಿ ನಿಯೋಜಿಸಲಾಗಿದೆ.

ವಸುಂಧರಾ ದೊರೆಸ್ವಾಮಿ-ನೃತ್ಯ, ನಾಗೇಶ್ ಹೆಗಡೆ-ಮಾಧ್ಯಮ, ಪಿ.ಎಸ್. ಕಡೇಮನಿ-ಚಿತ್ರಕತೆ, ನಾ.ದಾಮೋದರ ಶೆಟ್ಟಿ-ರಂಗಭೂಮಿ, ಡಾ.ಜಯದೇವಿ ಜಂಗಮಶೆಟ್ಟಿ-ಸಂಗೀತ ಕ್ಷೇತ್ರದಿಂದ ಸದಸ್ಯರನ್ನಾಗಿ ಸಮಿತಿಗೆ ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

61 ಮಂದಿಗೆ ಪ್ರಶಸ್ತಿ?

ಕರ್ನಾಟಕ ಏಕೀಕರಣಗೊಂಡು 61 ವರ್ಷವಾದ ಹಿನ್ನೆಲೆಯಲ್ಲಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ 61 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಾಧ್ಯತೆಗಳಿವೆ. ಹೀಗಾಗಿ 1:2ರ ಅನುಪಾತದಲ್ಲಿ 122 ಮಂದಿಯ ಹೆಸರುಗಳನ್ನು ಪ್ರಶಸ್ತಿ ಆಯ್ಕೆ ಸಮಿತಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವರ ಸಮಿತಿಗೆ ಶಿಫಾರಸ್ಸು ಮಾಡಲಿದೆ.

ಆ ಬಳಿಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ಆಯ್ಕೆ ಮಾಡಲಿದ್ದು, ನವೆಂಬರ್ 1ರಂದು ರಾಜ್ಯೋತ್ಸವ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News