×
Ad

ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಪರಿಮಳಾ

Update: 2016-10-08 21:53 IST

ಸಾಗರ, ಅ.8: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧ್ದಿಗಾಗಿ ಸರಕಾರ ಅನುಷ್ಠಾನಕ್ಕೆ ತರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಗರಸಭಾ ಸದಸ್ಯೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪರಿಮಳಾ ಹೇಳಿದರು.

ಇಲ್ಲಿನ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳಿಗೆ ಕ್ಲಿಷ್ಟಕರ ಎನಿಸುವ ವಿಜ್ಞಾನ, ಅರ್ಥಶಾಸ್ತ್ರ, ವಾಣಿಜ್ಯ, ಇಂಗ್ಲಿಷ್ ಇನ್ನಿತರ ವಿಷಯಗಳ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಜೊತೆಗೆ ಭವಿಷ್ಯದಲ್ಲಿ ಕಷ್ಟ ಎಂದು ಕೊಳ್ಳುವ ವಿಷಯಗಳು ಸುಲಭ ಎನಿಸುತ್ತದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಇಂತಹ ತರಬೇತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಟಿ.ಗಂಗಾಧರಪ್ಪ, 12 ದಿನಗಳ ಕಾಲ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ಪರೀಕ್ಷೆ ಎದುರಿಸುವುದು, ಉತ್ತಮ ಫಲಿತಾಂಶ ಪಡೆಯಲು ಪಠ್ಯದಲ್ಲಿ ಅನುಸರಿಸಬೇಕಾದ ವಿಧಾನಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಹಿರಿಯ ಉಪನ್ಯಾಸಕರಾದ ಸುರೇಶಪ್ಪ, ಲೋಕೇಶ್, ಪ್ರಶಾಂತ್ ಹಾಜರಿದ್ದರು. ನಂತರ ತರಬೇತಿ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News