ಯುವ ಸಮೂಹದಲ್ಲಿ ಸಾಹಿತ್ಯಾಸಕ್ತಿ ಮೂಡಿಸಿ: ಡಿಸಿ

Update: 2016-10-08 16:24 GMT

ಮಡಿಕೇರಿ, ಅ.8: ಸಾಹಿತ್ಯಾಸಕ್ತಿಯನ್ನು ಕಳೆದು ಕೊಳ್ಳುತ್ತಿರುವ ಯುವ ಸಮೂಹವನ್ನು ಮತ್ತೆ ಸಾಹಿತ್ಯದೆಡೆಗೆ ಸೆಳೆಯುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಸ್ಥಳೀಯ ಬಾಲಭವನದಲ್ಲಿ ನಡೆದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯೊಂದಿಗೆ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳ ನಡುವೆ ಯುವ ಸಮೂಹದಲ್ಲಿ ಸಾಹಿತ್ಯಾಭಿರುಚಿ ಕಡಿಮೆಯಾಗುತ್ತಿದೆ. ಇಂತಹ ಸಂದಿಗ್ಧ ಕಾಲ ಘಟ್ಟದಲ್ಲಿ ಕವಿಗೋಷ್ಠಿಗಳು ದಸರಾಕ್ಕಷ್ಟೇ ಸೀಮಿತವಾಗದೆ ಎಲ್ಲ ಸಮಯಗಳಲ್ಲೂ ಆಯೋಜನೆಗೊಂಡು ಸಾಹಿತ್ಯದೆಡೆಗಿನ ಆಸಕ್ತಿಯನ್ನು ಹೆಚ್ಚಿಸುವಂತಾಗಬೇಕು ಎಂದರು.

ಹಸಿರ ಪರಿಸರದ, ಬೆಟ್ಟಗುಡ್ಡಗಳ ಪ್ರಾಕೃತಿಕ ಸೌಂದರ್ಯದ ನೆಲೆಬೀಡಾದ ಕೊಡಗು ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ವಿಶಿಷ್ಟ ಸಂಸ್ಕೃತಿ ಮತ್ತು ಸಾಹಿತ್ಯಕ್ಕೂ ಜಿಲ್ಲೆ ಹೆಸರಾಗಿದ್ದು, ಇವುಗಳ ಬೆಳವಣಿಗೆಗೆ ಕೊಡವ ಮತ್ತು ಅರೆಭಾಷಾ ಅಕಾಡಮಿಗಳು ಇರುವುದನ್ನು ಜಿಲ್ಲಾಧಿಕಾರಿಗಳು ಉಲ್ಲೇಖಿಸಿದರು.

   ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕವನಗಳ ರಚನೆಗೆ ಒತ್ತಾಸೆ ನೀಡುವ ಮೂಲಕ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾದ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಯುವ ಸಮೂಹ ಸಾಹಿತ್ಯಾಭಿಮಾನವನ್ನು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದರು. ಕವನ ಸಂಕಲನ ಅನಾವರಣ: ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಆಯ್ದ ಕವನಗಳ ಚಿಗುರು ಸಂಕಲನವನ್ನು ನಗರದ ದಸರಾ ಸಮಿತಿ ಅಧ್ಯಕ್ಷರು ಹಾಗೂ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅನಾವರಣಗೊಳಿಸಿದರು

ಈ ಸಂದರ್ಭ ಕವನವೊಂದನ್ನು ವಾಚಿಸಿ ಗಮನ ಸೆಳೆದ ಅವರು, ಹಿಂದೆ ದಸರಾ ಉತ್ಸವ ಸಂದರ್ಭ ನಡೆಯುತ್ತಿದ್ದ ಕವಿಗೋಷ್ಠಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಾಲ್ಗೊಳ್ಳುತ್ತಿದ್ದರು. ಆದರೆ ಪ್ರಸ್ತುತ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗಿರುವುದು ಉತ್ತಮ ಬೆಳವಣಿಗೆಯೆಂದು ಹರ್ಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ರತ್ನಾ ಕಾಳೇಗೌಡ ಮಾತನಾಡಿ, ರಾಷ್ಟ್ರ ರಕ್ಷಣೆಗೆ ಅಸಂಖ್ಯಾತ ಸಂಖ್ಯೆಯಲ್ಲಿ ವೀರ ಯೋಧರನ್ನು ನೀಡಿದ ಕೊಡಗು ಪ್ರಾಕೃತಿಕ ಸೌಂದರ್ಯದ ಗಣಿ. ಇಂತಹ ನಾಡಿನಲ್ಲಿ ಸಾಹಿತ್ಯಾಸಕ್ತಿಯ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕೆಂದರು.

ಕವನ ವಾಚನ: 

 ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಕವನ ವಾಚನ ಸಂದರ್ಭ ಆಹ್ವಾನಿತ ಕವಿಗಳಾದ ಕುಶಾಲನಗರದ ಸುನೀತಾ ಲೋಕೇಶ್ ಕನ್ನಡ ಕವನವನ್ನು, ಬೆಟ್ಟಗೇರಿಯ ಕಡ್ಲೇರ ತುಳಸಿ ಮೋಹನ್ ಅರೆಭಾಷೆಯಲ್ಲಿ, ಮಡಿಕೇರಿಯ ಐತಿಚಂಡ ರಮೇಶ್ ಉತ್ತಪ್ಪಕೊಡವ ಭಾಷೆಯಲ್ಲಿ ಕವನಗಳನ್ನು ವಾಚಿಸಿದರು. ವಿವಿಧ ಭಾಷೆಗಳಲ್ಲಿ ಒಟ್ಟು 44 ಕವಿಗಳಿಗೆ ಕವನ ವಾಚಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಎ.ಸಿ.ಚುಮ್ಮಿದೇವಯ್ಯ, ಪ್ರಮುಖರಾದ ಕಿಶನ್ ಪೂವಯ್ಯ, ಕಸ್ತೂರಿ ಗೋವಿಂದಮ್ಮಯ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News