ಮಾನವನ ಆಹಾರದಲ್ಲೂ ರಾಜಕಾರಣ: ಬಸವರಾಜ್
ಅಂಕೋಲಾ, ಅ.8: ಮನುಷ್ಯ ಸೇವಿಸುವ ಆಹಾರವನ್ನೇ ಈಗ ರಾಜಕಾರಣ ಮಾಡುತ್ತಿರುವುದು ದೇಶದೆಲ್ಲೆಡೆ ಕಂಡುಬರುತ್ತಿದೆ. ಸಂವಿಧಾನದಲ್ಲಿಯೇ ಆಯಾ ಪಂಗಡದವರ ಆಹಾರ ಪದ್ಧತಿಗೆ ಅನುಮತಿಯಿದೆ. ಆದರೆ ಕೆಲವರ ಹಿತಾಸಕ್ತಿಯಿಂದಾಗಿ ದೇಶದಲ್ಲಿ ಪ್ರೀತಿ ಹುಟ್ಟಿಸುವುದರ ಬದಲು ದ್ವೇಷದ ಕಿಚ್ಚನ್ನು ಹಚ್ಚುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಪ್ರಮುಖ ಬಸವರಾಜ ಸೂಳೆಬಾವಿ ಅಭಿಪ್ರಾಯಪಟ್ಟರು.
ಗದಗದಿಂದ ಉಡುಪಿಗೆ ಹೊರಟಿದ್ದ ಸ್ವಾಭಿಮಾನಿ ಸಂಘರ್ಷ ಜಾಥಾ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿನ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರ ಮೇಲೆ ಗುಜರಾತಿನಲ್ಲಿ ನಡೆದ ಅಮಾನುಷ ವರ್ತನೆಗಳೇ ವ್ಯಕ್ತಿಗಳ ತಾರತಮ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.
ಜಾಥಾದಲ್ಲಿ ಕೆ.ರಮೇಶ್, ಡಾ. ಸಂಜು ಕುಲಕರ್ಣಿ, ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ, ರೈತ ಮುಖಂಡ ಶಾಂತಾರಾಮ ನಾಯಕ ಅಗಸೂರು, ಕವಿ ಕೃಷ್ಣ ನಾಯಕ ಹಿಚ್ಕಡ, ಪುರಸಭೆ ಸದಸ್ಯ ಸಂದೀಪ ಬಂಟ, ಪ್ರಮುಖರಾದ ಗಣಪತಿ ಗಾಂವಕರ, ವಿಜಯಕುಮಾರ ನಾಯ್ಕ, ಉದಯಕುಮಾರ ನಾಯ್ಕ, ಎಲ್. ನಾರಾಯಣಸ್ವಾಮಿ, ಕೆ.ಎಚ್. ಪಾಟೀಲ, ರೇಣುಕಾ ಪೂಜಾರ, ಶರೀಫ್ ಬಿಳಿಮಲೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.