×
Ad

ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಸಚಿವ ಕಾಗೋಡು ತಿಮ್ಮಪ್ಪ

Update: 2016-10-08 21:58 IST

ಸಾಗರ,ಅ 8: ಸೊರಬ ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಪಟ್ಟ ಕಡತಗಳನ್ನು ಲೋಕೋಪಯೋಗಿ ಸಚಿವರಿಗೆ ಹಸ್ತಾಂತರಿಸಲಾಗಿದೆ. ಡಿಸೆಂಬರ್‌ನ ಒಳಗೆ ಅನುದಾನ ಬಿಡುಗಡೆ ಮಾಡುವಂತೆ ಸಚಿವರ ಮೇಲೆ ಒತ್ತಡ ಹೇರುವುದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪಹೇಳಿದ್ದಾರೆ.

 ಇಲ್ಲಿನ ನಗರಸಭೆಯಲ್ಲಿ ಶನಿವಾರ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಅವರು ಮಾತನಾಡುತ್ತಿದ್ದರು. ಮುಂದಿನ ತಿಂಗಳಿನೊಳಗೆ ಆಶ್ರಯ ನಿವೇಶನ ಹಂಚಿಕೆ ಕುರಿತು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಇಕ್ಕೇರಿ ರಸ್ತೆಯಲ್ಲಿ ಸುಮಾರು 10 ಎಕರೆ ಜಾಗವನ್ನು ಆಶ್ರಯ ನಿವೇಶನವಾಗಿ ಹಂಚಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ನಗರೋತ್ಥಾನ ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೊಸದಾಗಿ ನಗರೋತ್ಥಾನ ಯೋಜನೆಯಡಿ 8 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದಕ್ಕಾಗಿ 5 ಕೋಟಿ ರೂ. ಹೆಚ್ಚುವರಿ ಅನುದಾನ ಕೋರಲಾಗಿದೆ ಎಂದರು.

ಜೊತೆಗೆ ಟಿ.ವಿ.ಎಸ್. ಶೋರೂಂ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣಕ್ಕೆ ಹೆಚ್ಚುವರಿ ಯಾಗಿ 50 ಲಕ್ಷ ರೂ. ಅನುದಾನ ನೀಡಲಾಗುವುದು. ಡಿಸೆಂಬರ್ ಅಂತ್ಯದ ಒಳಗೆ ಬಸ್ ನಿಲ್ದಾಣ ಲೋಕಾರ್ಪಣೆಯಾಗಬೇಕು ಎಂದು ಕಾಗೋಡು ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಳಚರಂಡಿ ಯೋಜನೆಯಡಿ 122 ಕಿ.ಮಿ. ಕಾಮಗಾರಿ ಮುಗಿದಿದ್ದು, ಇನ್ನು 89 ಕಿ.ಮೀ. ಬಾಕಿ ಇದೆ. 2017ರ ಮಾರ್ಚ್ ನೊಳಗೆ ಕಾಮಗಾರಿ ುನ್ನು ಪೂರ್ಣಗೊಳಿಸಬೇಕು. ಒಳಚರಂಡಿ ವ್ಯವಸ್ಥೆಯಡಿ ಮನೆ ಸಂಪರ್ಕ ಕಲ್ಪಿಸಲು 26 ಕೋಟಿ ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ನಗರ ಸಭೆ ಆಡಳಿತ ಪ್ರತಿ ತಿಂಗಳು ಒಳ ಚರಂಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ಅಧ್ಯಕ್ಷೆ ಎನ್.ಉಷಾ, ಉಪಾಧ್ಯಕ್ಷೆ ಮರಿಯಾ ಲೀಮಾ, ಸದಸ್ಯರಾದ ತೀ.ನ.ಶ್ರೀನಿವಾಸ್, ಆರ್. ಗಣಾಧೀಶ್, ಜಿ.ಕೆ.ಭೈರಪ್ಪ, ಮೋಹನ್, ಉಲ್ಲಾಸ ಶ್ಯಾನಭಾಗ್, ಪೌರಾಯುಕ್ತ ಬಿ.ಎನ್. ಚಂದ್ರಶೇಖರ್, ಕೆ.ಎಚ್.ನಾಗಪ್ಪ, ಒಳಚರಂಡಿ ಮಂಡಳಿಯ ಚಂದ್ರಶೇಖರ್, ಶ್ರೀಪಾದ ಮತ್ತಿತರರು ಹಾಜರಿದ್ದರು. ಸಂಗಳದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ 6 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆಡಳಿತಾತ್ಮಕ ಅನುಮೋದನೆಗೆ ಕಾಯಲಾಗುತ್ತಿದೆ. ಘಟಕ ನಿರ್ಮಾಣವಾದರೆ ಕಸ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ. ಇದರ ಜೊತೆಗೆ ವಿಜಯನಗರ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಪಾರ್ಕ್ ನಿರ್ಮಾಣಕ್ಕೆ 96 ಲಕ್ಷ ರೂ. ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News