ಹಾರಂಗಿಗೆ ಕೇಂದ್ರ ಜಲ ಮಂಡಳಿ ಭೇಟಿ
ಹಾರಂಗಿಗೆ ಕೇಂದ್ರ ಜಲ ಮಂಡಳಿ ಭೇಟಿಕುಶಾಲನಗರ, ಅ. 8: ಕಾವೇರಿ ನೀರಿನ ಹಂಚಿಕೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ತಲೆದೋರಿರುವ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ಸುಪ್ರೀಂಕೋರ್ಟ್ ನಿಯೋಜಿಸಿದ ಕೇಂದ್ರ ಜಲ ಆಯೋಗದ ತಜ್ಞರ ತಂಡ ಶನಿವಾರ ಹಾರಂಗಿ ಅಣೆಕಟ್ಟೆ ಯೋಜನಾ ವ್ಯಾಪ್ತಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.
ಕೇಂದ್ರ ಜಲ ಆಯೋಗದ ಉಪ ನಿರ್ದೇಶಕ ಅಶೋಕ್ ಕುಮಾರ್, ಕೃಷ್ಣನ್ ಉಣ್ಣಿ, ಪಾಂಡಿಚೇರಿಯ ಅಧೀಕ್ಷಕ ಅಭಿ ಯಂತರ ಷಣ್ಮುಗ ಸುಂದರಂ ನೇತೃತ್ವದ ತಂಡ ಹಾರಂಗಿ ಅಣೆಕಟ್ಟೆ ಯೋಜನಾ ವ್ಯಾಪ್ತಿಯ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಅಣೆಕಟ್ಟೆಯ ನೀರಿನ ಸಂಗ್ರಹಣಾ ಸಾಮರ್ಥ್ಯ, ಪ್ರಸಕ್ತ ಸಾಲಿನ ಮಳೆ ಪ್ರಮಾಣ, ಜಲಾಶಯಕ್ಕೆ ಒಳಹರಿವು, ಯೋಜನಾ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ವಿಸ್ತಾರ, ಕೃಷಿ ಚಟುವಟಿಕೆ ಹಾಗೂ ಸ್ಥಿತಿಗತಿಗಳು, ಜಲಾಶಯದಿಂದ ನದಿಗೆ ಮತ್ತು ನಾಲೆಗೆ ಹರಿಸಲಾದ ನೀರಿನ ಪ್ರಮಾಣ, ಪ್ರಸಕ್ತ ನೀರಿನ ಒಳಹರಿವು ಹಾಗೂ ಜಲಾಶಯದಲ್ಲಿ ಉಳಿಕೆಯಾಗಿರುವ ನೀರಿನ ಪ್ರಮಾಣ ಸೇರಿದಂತೆ ಒಟ್ಟಾರೆ ಹಾರಂಗಿ ಅಣೆಕಟ್ಟೆ ಜಲಾಶಯದ ನೀರಿನ ವಾಸ್ತವಾಂಶದ ಬಗ್ಗೆ ಪರಿಶೀಲನೆ ನಡೆಸಿ ವಿವರಗಳನ್ನು ಸಂಗ್ರಹಿಸಿತು.
ಈ ಸಂದರ್ಭ ಹಾರಂಗಿ ಅಣೆಕಟ್ಟೆ ವಿಭಾಗದ ಅಧಿಕಾರಿಗಳಾದ ಎನ್.ಸಿ. ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜ್, ರಾಜೇಗೌಡ, ಸಹಾಯಕ ಅಭಿಯಂತರ ನಾಗರಾಜ್ ಅಣೆಕಟ್ಟೆಯ ಮಾಹಿತಿಗಳನ್ನು ತಂಡಕ್ಕೆ ನೀಡಿದರು.