ವೇಮುಲಾ ಸಾವಿನ ತನಿಖಾ ವರದಿ ಬಹಿರಂಗಕ್ಕೆ ಕೇಂದ್ರದ ನಿರಾಕರಣೆ

Update: 2016-10-09 13:08 GMT

ಹೊಸದಿಲ್ಲಿ, ಅ.9: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನ ವಿದ್ವಾಂಸ ರೋಹಿತ್ ವೇಮುಲಾರ ಸಾವಿನ ಕುರಿತಾದ ಆಯೋಗವೊಂದರ ವರದಿಯನ್ನು ಬಹಿರಂಗಪಡಿಸಲು ಕೇಂದ್ರ ಸರಕಾರ ನಿರಾಕರಿಸಿದೆ.

ಆ ಕಡತವು ಸಲ್ಲಿಕೆಯ ಹಂತದಲ್ಲಿದೆ. ಆದುದರಿಂದ ಈ ಸಮಯದಲ್ಲಿ ವರದಿಯ ಪ್ರತಿಯನ್ನು ನೀಡಲು ಸಾಧ್ಯವಿಲ್ಲವೆಂದು ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಪಿಟಿಐ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯೊಂದಕ್ಕುತ್ತರವಾಗಿ ತಿಳಿಸಿದೆ.

ಮಾಹಿತಿ ನಿರಾಕರಣೆಗೆ ಅದು ಕಾಯ್ದೆಯ ಯಾವುದೇ ಪ್ರಸ್ತಾವವನ್ನು ಕಾರಣವಾಗಿ ನೀಡಿಲ್ಲ. ಆರ್‌ಟಿಐ ಕಾಯ್ದೆಯ ಯಾವ ಪ್ರಸ್ತಾವದ ಅನ್ವಯ ಮಾಹಿತಿ ನೀಡಿಕೆಯನ್ನು ತಡೆಹಿಡಿಯಲಾಗಿದೆಯೆಂಬುದನ್ನು ಸರಕಾರಿ ಇಲಾಖೆಯೊಂದು ನಮೂದಿಸಬೇಕೆಂದು ನಿರೀಕ್ಷಿಸಲಾಗಿದೆ.

ಹೈದರಾಬಾದ್ ವಿವಿಯಲ್ಲಿ ವೇಮುಲಾರ ಸಾವಿಗೆ ಕಾರಣವಾದ ಘಟನೆಗಳ ಕುರಿತು ತನಿಖೆ ನಡೆಸಲು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ನಿವೃತ್ತ ನ್ಯಾಯಮೂರ್ತಿ ಅಶೋಕ್ ಕುಮಾರ್ ರೂಪನ್ವಾಲ್‌ರ ನೇತೃತ್ವದಲ್ಲಿ ಆಯೋಗವೊಂದನ್ನು ಫೆಬ್ರವರಿಯಲ್ಲಿ ನೇಮಿಸಿತ್ತು.
ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ದೂರುಗಳ ಪರಿಹಾರಕ್ಕಾಗಿ ಈಗಿರುವ ವ್ಯವಸ್ಥೆಯ ಪರಾಮರ್ಶೆ ಹಾಗೂ ಸುಧಾರಣೆಯ ಸಲಹೆ ನೀಡುವ ಹೊಣೆಯನ್ನೂ ಅದಕ್ಕೆ ವಹಿಸಲಾಗಿತ್ತು.

ಆಯೋಗವು ಸಚಿವಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.
ಆಯೋಗವು ವೇಮುಲಾರ ಜಾತಿಯ ಕುರಿತಾಗಿ ಪ್ರಶ್ನೆಯೆತ್ತಿದೆ ಹಾಗೂ ಅವರ ತಾವು ವೈಯಕ್ತಿಕ ಕಾರಣಗಳಿಂದಾಗಿದೆಯೆಂದು ವರದಿಯಲ್ಲಿ ಹೇಳಿದೆಯೆಂದು ಇತ್ತೀಚೆಗೆ ಕೆಲವು ಮಾಧ್ಯಮ ವರದಿಗಳು ಪ್ರತಿಪಾದಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News