×
Ad

ಕುಡಿಯುವ ನೀರಿಗೆ ಆದ್ಯತೆ, ಪಟ್ಟಣದ ಸ್ವಚ್ಛತೆಗೆ ಕಠಿಣ ಕ್ರಮ

Update: 2016-10-09 22:16 IST

 ವೀರಾಜಪೇಟೆ,ಅ.9: ವೀರಾಜಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ಹಾಗೂ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅಧ್ಯಕ್ಷ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯಿತ್‌ನ ಮಾಸಿಕ ಸಭೆ ತೀರ್ಮಾನಿಸಲಾಯಿತು.

  ವೀರಾಜಪೇಟೆ ತಾಲೂಕಿನಲ್ಲಿ ಮಳೆ ಕೊರತೆಯ ಕಾರಣ ಸರಕಾರ ಈ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿಸಲಾಗಿದೆ. ಮುಂದೆರಡು ತಿಂಗಳಲ್ಲಿ ವೀರಾಜಪೇಟೆ ಪಟ್ಟಣ ಕುಡಿಯುವ ನೀರಿನ ಸಮಸ್ಯೆಯನ್ನು ಕಾಣಲಿದೆ ಎಂಬ ಆರೋಪಗಳಿಗೆ ಸಮಹಮತವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ನಾಮ ನಿರ್ದೇಶನ ಸದಸ್ಯ ಡಿ.ಪಿ.ರಾಜೇಶ್ ಮಾತನಾಡಿ, ಸದಸ್ಯರ ಆಸನ ವ್ಯವಸ್ಥೆಯಲ್ಲಿ ಶಿಷ್ಟಾಚಾರವನ್ನು ಪಾಲಿಸಿಲ್ಲ, ಈ ನಿಟ್ಟಿನಲ್ಲಿ ನಾಮ ನಿರ್ದೇಶನ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಿಂದಲೂ ಇದೇ ಆಸನ ವ್ಯವಸ್ಥೆ ಮುಂದುವರಿದಿದೆ. ಇದರಲ್ಲಿ ಯಾವುದೇ ಲೋಪದೋಷವಿಲ್ಲ ಇದರಿಂದ ಯಾರಿಗೂ ಅಸಮಾಧಾನವಿಲ್ಲ ಎಂದು ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಪ್ರತಿಕ್ರಿಯಿಸಿದರು.

ಹಿರಿಯ ಸದಸ್ಯ ಎಸ್.ಎಚ್.ಮೈನುದ್ದೀನ್ ಮಾತನಾಡಿ, ಪಟ್ಟಣ ಪಂಚಾಯತ್‌ಗೆ ಸೇರಿದ ನೆಹರೂನಗರದಲ್ಲಿ 64 ಎಕರೆ ಪೈಸಾರಿ ಇದೆ. ಇದನ್ನು ಹೊರತು ಪಡಿಸಿದಂತೆ 30 ಎಕರೆ ಪೈಸಾರಿಯಲ್ಲಿ ಕೆಲವು ನಿರ್ಗತಿಕರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಕಾನೂನು ಪ್ರಕಾರ ಅರ್ಹತಾ ದೃಢೀಕರಣ ಪತ್ರ ನೀಡಿ. ಪೈಸಾರಿಯಲ್ಲಿ ಖಾಲಿ ಇರುವ ಜಾಗವನ್ನು ಅರ್ಹ ನಿವೇಶನ ರಹಿತರಿಗೆ ಹಂಚುವಂತೆ ಸಭೆಯಲ್ಲಿ ತಿಳಿಸಿದರು. ಈ ತೀರ್ಮಾನವನ್ನು ಸಭೆ ಸಮ್ಮತಿಸಿತು.

ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮಾತನಾಡಿ, ಪಟ್ಟಣ ಪಂಚಾಯಿ್ಗೆ ಸೇರಿದ 66 ಮಳಿಗೆಗಳು ಮರು ಟೆಂಡರ್‌ಗೆ ವಿರೋಧವಿದೆ. ಮಳಿಗೆಗೆಳು ದುಸ್ಥಿಯಲ್ಲಿದ್ದರೆ ಅದನ್ನು ದುರಸ್ತಿಪಡಿಸಿ ಹಿಂದಿನ ಬಾಡಿಗೆದಾರರಿಗೆ ನವೀಕರಿಸಿ ಕೊಡಬೇಕು ಎಂದು ಹೇಳಿದಾಗ ಇದಕ್ಕೆ ಇತರ 18 ಮಂದಿ ಧ್ವನಿಗೂಡಿಸಿದರು. ಮಳಿಗೆಗಳ ಮರು ಹರಾಜಿಗೆ 19 ಮಂದಿಯ ವಿರೋಧವಿದೆ ಎಂದು ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಸರಕಾರದ ಸುತ್ತೋಲೆ ಹಾಗೂ ರಾಜ್ಯ ಉಚ್ಚ ನ್ಯಾಯಾಲಂುದ ಆದೇಶದ ಮೇರೆಗೆ ಮಳಿಗೆಗಳ ಹರಾಜಿಗೆ ಪಂಚಾಯತ್ ಕ್ರಮ ಕೈಗೊಂಡಿತ್ತು ಎಂದು ಕೃಷ್ಣ ಪ್ರಸಾದ್ ಸಭೆಗೆ ತಿಳಿಸಿದರು.

ಇದೇ ಸಂದರ್ಭ ಹಿರಿಯ ಸದಸ್ಯ ಎಸ್.ಎಚ್.ಮತೀನ್ ಮಾತನಾಡಿ, ಪಂಚಾಯಿತಿ 66 ಅಂಗಡಿ ಮಳಿಗೆಗಳ ಕುರಿತು ಪಂಚಾಯತ್ ಸದಸ್ಯರಲ್ಲಿಯೇ ತನಿಖಾ ಸಮಿತಿುನ್ನು ರಚಿಸಿ ಸಮಿತಿಯ ವರದಿಯ ಆಧಾರದ ಮೇರೆ ಮುಂದಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಪಟ್ಟಣ ಪಂಚಾಯತ್‌ಗೆ ಸೇರಿದ ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಎರಡು ವಿಶಾಲ ತಂಗುದಾಣದಲ್ಲಿ ಮಗುವಿನ ತಾಯಿಗೆ ಹಾಲು ಕೊಡಲು ಪ್ರತ್ಯೇಕ ಕೊಠಡಿ ಇಲ್ಲ, ಈಗಿನ ಪರಿಸ್ಥಿತಿಯಲ್ಲಿ ತಾಯಂದಿರು ಮಗುವಿಗೆ ಹಾಲು ಕೊಡುವ ಸಲುವಾಗಿ ಖಾಸಗಿ ಬಸ್ಸು ನಿಲ್ದಾಣದ ಅಂಗಡಿಗಳನ್ನು ಹುಡುಕುವಂತಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಬಸ್ಸು ನಿಲ್ದಾಣದ ಮಹಿಳಾ ತಂಗುದಾಣದಲ್ಲಿ ಮಗುವಿನ ತಾಯಂದಿರಿಗೆ ಸುರಕ್ಷಿತವಾದ ಅಲ್ಯೂಮಿನಿಯಂ ಫೆಬ್ರಿಕೇಶನ್‌ನ ಪ್ರತ್ಯೇಕ ಕೊಠಡಿಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯನ್ನು ಒತ್ತಾಯಿಸಿದರು. ಇದಕ್ಕೆ ಸಭೆ ಸಮ್ಮತಿಸಿ ನಿರ್ಣಯವನ್ನು ಅಂಗೀಕರಿಸಿತು.

ಸದಸ್ಯ ಪಾಂಡಂಡ ರಚನ್ ಮೇದಪ್ಪಮಾತನಾಡಿ, ಪಟ್ಟಣದಲ್ಲಿರುವ ಹೊಟೇಲ್, ಬೇಕರಿ, ಮೆಸ್‌ಗಳು, ಕ್ಯಾಂಟೀನ್, ಮಿನಿ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆ ಬಗ್ಗೆ

ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲ ಹೊಟೇಲ್‌ಗಳಲ್ಲಿ ನ್ಯಾಯ ಸಮ್ಮತ ದರದ ದರ ಪಟ್ಟಿಯನ್ನು ನಾಮಫಲಕದಲ್ಲಿ ಪ್ರಕಟಿಸಬೇಕು. ಶುಚಿತ್ವಕ್ಕೆ ಆದ್ಯತೆ ನೀಡದ ಹೊಟೇಲ್, ಬೇಕರಿಗಳ ಪರವಾನಿಗೆಯನ್ನು ನವೀಕರಿಸದಂತೆ ಆಗ್ರಹಿಸಿದರು. ಮಲಬಾರ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಎಲ್ಲರೂ ಬಳಸುವಂತಾಗಲು ಪಂಚಾಯತ್ ಆಡಳಿತ ಕ್ರಮ ವಹಿಸಬೇಕು. ಅನಾಥರು, ವಾರೀಸುದಾರರಿಲ್ಲದವರು, ಸ್ಮಶಾನದ ಸೌಲಭ್ಯ ಇಲ್ಲದವರಿಗೂ ಈ ಸ್ಮಶಾನದ ಸೌಲಭ್ಯ ಒದಗಿಸಲು ಪಂಚಾಯತ್ ಆಡಳಿತ ನೇರವಾಗಿ ಸ್ಪಂದಿಸುವಂತೆ ಆಗ್ರಹಿಸಿದರು. ಇದಕ್ಕೆ ಸಭೆ ಸಮ್ಮತಿಸಿ, ನಿರ್ಣಯವನ್ನು ಅಂಗೀಕರಿಸಿತು.

 ಕುಡಿಯುವ ನೀರನ್ನು ಸಂರಕ್ಷಿಸಲು ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲ ಬಾವಿಗಳು, ಬೋರ್‌ವೆಲ್‌ಗಳನ್ನು ಹಾಗೂ ನೀರನ್ನು ಶೇಖರಿಸುವ ಟ್ಯಾಂಕ್‌ಗಳನ್ನು ದುರಸ್ತಿಪಡಿಸುವುದು. ಪಟ್ಟಣದಲ್ಲಿ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವುದಾಗಿಯೂ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳುವುದಾಗಿಯೂ ಅಧ್ಯಕ್ಷ ಸಚಿನ್ ಕುಟ್ಟಯ್ಯ ಸಭೆಗೆ ತಿಳಿಸಿದರು.ಚರ್ಚೆಯಲ್ಲಿ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ರಾಫಿ, ಕೆ.ಎನ್.ವಿಶ್ವನಾಥ್, ಇ.ಸಿ.ಜೀವನ್. ಭಾಗವಹಿಸಿದ್ದರು.ಉಪಾಧ್ಯಕ್ಷೆ ತಸ್ನೀಂ ಅಖ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ.ಸುನೀತಾ, ಅಭಿಯಂತರ ಎನ್.ಪಿ.ಹೇಮ್‌ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಸೋಮಶೇಖರ್ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News