‘ಲಯ, ಛಂದಸ್ಸು, ತಾಳವನ್ನು ಭಾಷೆಯ ಮೂಲಕ ದುಡಿಸಿಕೊಳ್ಳಿ: ಸಾಹಿತಿ ಡಾ. ನಾ.ಡಿಸೋಜ

Update: 2016-10-09 16:47 GMT

ಸಾಗರ, ಅ.9: ಲಯ, ಛಂದಸ್ಸು, ತಾಳವನ್ನು ಭಾಷೆಯ ಮೂಲಕ ದುಡಿಸಿಕೊಂಡಾಗ ಉತ್ತಮವಾದ ಕಾವ್ಯ ಸೃಷ್ಟಿಯಾಗುತ್ತದೆ. ಹೀಗೆ ಲಯಬದ್ಧವಾಗಿ ಸೃಷ್ಟಿಯಾದ ಕಾವ್ಯಗಳು ಮಾತ್ರ ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ ಎಂದು ಸಾಹಿತಿ ಡಾ. ನಾ.ಡಿಸೋಜ ಹೇಳಿದರು.

ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಾಗರ ಶಾಖೆ, ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್, ಸಹೃದಯ ಬಳಗ ಹಾಗೂ ವೀತರಾಗ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಅವರು ತಮ್ಮ ಸ್ವರಚಿತ ‘ಅಣೆಕಟ್ಟು’ ಕವನ ವಾಚನದ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಸ್ತುತ ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ. ಕಾವ್ಯ ನಮ್ಮಲ್ಲಿ ವ್ಯವಸ್ಥೆಯ ವಿರುದ್ಧ ಕ್ರಾಂತಿಯನ್ನು ಸೃಷ್ಟಿಸುವ ಕೆಲಸ ಮಾಡಬೇಕು. ಯಾವುದೋ ಕಾಲದ ವಿಷಯವನ್ನು ವಸ್ತುವಾಗಿ ತೆಗೆದುಕೊಂಡು ಕಾವ್ಯ ರಚಿಸುವುದಕ್ಕಿಂತ ಪ್ರಸ್ತುತ ಸಂದರ್ಭದಲ್ಲಿನ ವಿಷಯ ಕುರಿತು ಕವನ ರಚಿಸಿ, ಸಮೂಹ ಜಾಗೃತಿಗೆ ಕವಿಗಳು ಪ್ರಯತ್ನ ನಡೆಸಬೇಕು ಎಂದರು. ಕಾವ್ಯ ಎಂದರೆ ಹಾಡಲು ಮಾತ್ರ ಯೋಗ್ಯ ಎನ್ನುವ ಮನೋಭಾವ ಹಿಂದೆ ಇತ್ತು. ಆದರೆ ಬದಲಾದ ದಿನಮಾನಗಳಲ್ಲಿ ಕಾವ್ಯದ ಮೂಲಕ ಮನಸ್ಸಿನ ಭಾವನೆಗಳನ್ನು ತೆರೆದಿಡುವ ಕೆಲಸ ನಡೆಯುತ್ತಿದೆ. ಒಬ್ಬ ಕವಿ ತಾನು ಕಂಡಿದ್ದನ್ನು, ಅನುಭವಿಸಿದ್ದನ್ನು ಶಬ್ದ ರೂಪ ನೀಡಿ ಅದನ್ನು ಕಾವ್ಯವಾಗಿ ಪ್ರಕಟಿಸಿದಾಗ ಆತನು ಹೆಚ್ಚಿನ ಸಂತೋಷಪಡುತ್ತಾನೆ ಎಂದರು. ಕವಿಗೋಷ್ಠಿಯಲ್ಲಿ ವಿ.ಗಣೇಶ್, ಜಿ.ನಾಗೇಶ್, ರವೀಂದ್ರ ಭಟ್ ಕುಳಿಬೀಡು, ನಾಗರಾಜ ತೋಂಬ್ರಿ, ಪ್ರಕಾಶ್ ಆರ್.ಕಮ್ಮಾರ್, ವಿ.ಟಿ.ಸ್ವಾಮಿ, ಡಾ.ಹಾ.ಉಮೇಶ್, ಬಸ್ತಿ ಸದಾನಂದ ಪೈ, ಎಂ.ನಾರಾಯಣಪ್ಪ, ಶ್ರಾವ್ಯಾಸಾಗರ್, ಮಹಾಬಲಗಿರಿಯಪ್ಪ, ಪರಮೇಶ್ ಕರೂರು, ಚಂದ್ರಶೇಖರ ಶಿರವಂತೆ, ಪೃಥ್ವಿ, ಎಲ್.ಟಿ.ಗವಿಯಪ್ಪ ಇನ್ನಿತರರು ಕವನ ವಾಚನ ಮಾಡಿದರು. ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪಇಂದಿರಾ ಗಾಂಧಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ ರಾವ್, ನಗರಸಭೆ ಸದಸ್ಯ ರವಿ ಜಂಬಗಾರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News