ಕಾಲೇಜು ಜೀವನದಲ್ಲಿ ಎನ್ನೆಸ್ಸೆಸ್ ಸೇರುವುದು ಅತ್ಯಗತ್ಯ: ದೇವೇಂದ್ರ ಜೈನ್
ಚಿಕ್ಕಮಗಳೂರು, ಅ.11: ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಕಾಲೇಜು ಜೀವನದಲ್ಲಿ ಎನ್ನೆಸ್ಸೆಸ್ ಸೇರಿಕೊಳ್ಳುವುದು ಅತ್ಯಗತ್ಯ ಎಂದು ನಗರದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಿಬಿಸಿ ಅಧ್ಯಕ್ಷ ದೇವೇಂದ್ರ ಕುಮಾರ್ ಜೈನ್ ಹೇಳಿದರು. ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎನ್ನೆಸ್ಸೆಸ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಎನ್ನೆಸ್ಸೆಸ್ ಒಂದು ಚಟುವಟಿಕಾ ಸಂಸ್ಥೆ ಮಾತ್ರವಲ್ಲ.ಅದೊಂದು ಮಾನವ ಸ್ಪಂದನೆಯ ಸಂಸ್ಥೆ. ಓದುವುದು, ಅಂಕ ತೆಗೆಯುವುದು ಇಷ್ಟನ್ನೇ ಗುರಿಯಾಗಿಟ್ಟುಕೊಂಡು ಶೈಕ್ಷಣಿಕ ಜೀವನದಲ್ಲಿದ್ದರೆ ಉಪಯೋಗವಿಲ್ಲ. ಓದಿನ ನಂತರ ಸಮಾಜದಲ್ಲಿ ನಾವು ಹೇಗಿರಬೇಕು? ಸಮಾಜದ ನೋವು, ನಲಿವುಗಳಿಗೆ ಓದಿದವರ ಸ್ಪಂದನೆ ಹೇಗಿರಬೇಕು? ಎಂಬುದನ್ನು ನಾವು ಎನ್ನೆಸ್ಸೆಸ್‌ನ್ನು ಸೇರಿ ಕಲಿಯಬೇಕು ಎಂದು ನುಡಿದರು. ಎನ್ನೆಸ್ಸೆಸ್ ರಾಜ್ಯ ಘಟಕದ ಸದಸ್ಯ, ಬೀರೂರಿನ ಉಪನ್ಯಾಸಕ ಬಿ.ವಿ.ಪ್ರದೀಪ್ ಮಾತನಾಡಿ, ಎನ್ನೆಸ್ಸೆಸ್‌ನಲ್ಲಿ ಸಾಮೂಹಿಕವಾಗಿ ನಾವು ಹೇಗೆ ಬದುಕಬೇಕು ಎಂಬುದನ್ನು ಕಲಿಯಬಹುದು.
ದೇಶೀಯ ಪ್ರಜ್ಞೆಯಿಂದ ಉತ್ತಮ ಪ್ರಜೆಯಾಗಲು ಸಾಧ್ಯ. ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ಇದರ ಕೊಡುಗೆ ಸ್ವಾತಂತ್ರೋತ್ತರ ಭಾರತದಲ್ಲಿ ಅಪಾರವಾದುದು ಎಂದು ತಿಳಿಸಿದರು. ಎಇಎಸ್‌ಎಂಎಸ್‌ನ ಅಧ್ಯಕ್ಷ ಪ್ರಭು ಸೂರಿ ಮಾತನಾಡಿ, ಕಾಲೇಜಿಗೆ ನೂರು ಪುಸ್ತಕಗಳ ಕೊಡುಗೆ ಪ್ರಕಟಿಸಿದರು.
ಪ್ರಾಚಾರ್ಯ ಬಿ.ಆರ್.ಶ್ರೀನಿವಾಸ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಗಾಯಕ ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ ಎನ್ನೆಸ್ಸೆಸ್ ಗೀತೆ ಹಾಡಿದರು. ನಂದಿನಿ ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ತಮ್ಮಯ್ಯ ವಂದಿಸಿದರು.