×
Ad

ನಾಗರಿಕತೆ ಬೆಳೆದಂತೆ ಕರುಣೆ ನಾಶವಾಗುತ್ತಿದೆ: ಅಬ್ದುಲ್ ಅಝೀಝ್

Update: 2016-10-11 22:31 IST

 ಚಿಕ್ಕಮಗಳೂರು, ಅ.11: ವನ್ಯಜೀವಿಗಳು ಮನುಕುಲದ ರಕ್ಷಾ ಕವಚ. ಭೂ ಮಂಡಲದ ಸುಸ್ಥಿರತೆಗಾಗಿ ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಪಶ್ಚಿಮ ಘಟ್ಟ ಉಳಿಸಿ ಆಂದೋಲನ ರಾಜ್ಯ ಸಮಿತಿ ಸದಸ್ಯ ಗಜೇಂದ್ರ ಗೊರಸುಕುಡಿಗೆ ಅಭಿಪ್ರಾಯಿಸಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ನಗರದ ಎಸ್.ಟಿ.ಜೆ. ಮಹಿಳಾ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ವನ್ಯಜೀವಿ ದಿನ ಅಂಗವಾಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಪರಿಸರದ ಸಮತೋಲನಕ್ಕೆ ಸಸ್ಯ, ಪ್ರಾಣಿ, ಕೀಟ ಎಲ್ಲದರ ಅವಶ್ಯಕತೆಯೂ ಇದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇವೆಲ್ಲವನ್ನು ಬಳಸಿಕೊಳ್ಳುತ್ತಿದ್ದಾನೆ. ವಾಸ್ತವವಾಗಿ ಭೂ ಮಂಡಲದ ಇರುವಿಕೆಗೆ ಸಸ್ಯ, ಪ್ರಾಣಿ, ಕೀಟದ ಅಗತ್ಯವಿದೆಯೇ ಹೊರತು, ಮಾನವನ ಅಗತ್ಯ ಹೆಚ್ಚಾಗಿಲ್ಲ.

ಭೂಮಿ ತನಗಾಗಿ ಇರುವುದು ಎಂಬ ದೃಷ್ಟಿಕೋನದಿಂದ ಆಲೋಚಿಸುವುದನ್ನು ಬಿಡುವುದು ಒಳಿತು ಎಂದರು.

   ಪಶ್ಚಿಮ ಘಟ್ಟಗಳು ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಿಂದೆ ಶೇ.50ರಷ್ಟು ಅರಣ್ಯ ಭೂಮಿ ಇದ್ದು ಸಸ್ಯ ಶ್ಯಾಮಲೆ ಎನಿಸಿಕೊಂಡಿದ್ದ ಭಾರತದಲ್ಲಿ ಈಗ ಒಟ್ಟಾರೆ ಶೇ.11ರಷ್ಟು ಅರಣ್ಯ ಪ್ರದೇಶ ಅಷ್ಟೆ ಇದೆ. ಅದರಲ್ಲೂ ಶೇ.9 ದಟ್ಟ ಅರಣ್ಯವಾದರೆ ಶೇ.2 ಮಾನವ ನಿರ್ಮಿತ ಅರಣ್ಯ. ವನ್ಯ ಪ್ರಾಣಿಗಳಿರುವ ಜಾಗ ಇದರಲ್ಲಿ ಶೇ.1 ರಷ್ಟು ಮಾತ್ರ ಎಂದ ಗಜೇಂದ್ರ, ಕಾಡಿನಲ್ಲಿ ಹುಲಿ ಇದ್ದರೆ ಊರಿನ ಬಾವಿಯಲ್ಲಿ ನೀರಿರುತ್ತದೆ ಎಂಬ ಮಾತು ಹಳ್ಳಿಗರದ್ದಾಗಿತ್ತು. ಸಮೃದ್ಧ ಕಾಡಿದ್ದರೆ ಮಾತ್ರ ಹುಲಿ ವಾಸಿಸಲು ಸಾಧ್ಯ. ಕಾಡು ಚೆನ್ನಾಗಿದ್ದರೆ ಸಹಜವಾಗಿಯೇ ಮಳೆ ಬರುತ್ತದೆ.

ಮನುಷ್ಯನಿಗೆ ಬದುಕಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಸಂಪನ್ಮೂಲ ಭೂಮಿಗಿದೆ. ನಮ್ಮ ಸ್ವಾರ್ಥದಿಂದ ಅರಣ್ಯ ಕರಗಿ ವನ್ಯಜೀವಿಗಳ ಆವಾಸ ಸ್ಥಾನ ಕುಗ್ಗಿ ಅವುಗಳು ನಾಡಿನತ್ತ ಮುಖ ಮಾಡುವಂತಾಗಿದೆ ಎಂದರು.

ವಲಯಾರಣ್ಯಾಧಿಕಾರಿ ಅಬ್ದುಲ್ ಅಝೀಝ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾಗರಿಕತೆ ಬೆಳೆದಂತೆ ಕರುಣೆ ಇಲ್ಲದಂತಾಗಿದೆ. ವನ್ಯಜೀವಿಗಳ ಆವಾಸ ಸ್ಥಾನ ನಾವು ಆಕ್ರಮಿಸಿಕೊಳ್ಳುತ್ತಿದ್ದೇವೆ. ಇದರ ಪರಿಣಾಮವೇ ವನ್ಯಜೀವಿಗಳು ಆಹಾರ ನೀರಿಗಾಗಿ ಜನ ವಸತಿಯತ್ತ ಧಾವಿಸುತ್ತಿವೆ ಎಂದರು. ಸಮಾರಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕೆ. ಹಳದಪ್ಪ ವಹಿಸಿದ್ದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಸ್ವಾಗತಿಸಿ ಪ್ರಾಸ್ತಾವಿಸಿದರು. ಉಪನ್ಯಾಸಕ ಲೋಹಿತ್ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News