ರಿಪಬ್ಲಿಕನ್ ಪಕ್ಷದ ವಿರುದ್ಧ ಯುದ್ಧ ಸಾರಿದ ಟ್ರಂಪ್

Update: 2016-10-12 14:24 GMT

ವಾಶಿಂಗ್ಟನ್, ಅ. 12: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಂಗಳವಾರ ತನ್ನ ಪಕ್ಷದ ವಿರುದ್ಧ ಸಮರವನ್ನೇ ಸಾರಿದ್ದಾರೆ. ಹೌಸ್ ಸ್ಪೀಕರ್ ಪೌಲ್ ಡಿ. ರಯಾನ್ (ವಿಸ್ಕೋನ್ಸಿನ್), ಸೆನೆಟರ್ ಜಾನ್ ಮೆಕೇನ್ (ಆ್ಯರಿರೆನ) ಮತ್ತು ಪಕ್ಷದ ಇತರ ಚುನಾಯಿತ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಅದೇ ವೇಳೆ, ಚುನಾವಣೆಗೆ ಕೇವಲ ನಾಲ್ಕು ವಾರಗಳು ಉಳಿದಿರುವಂತೆಯೇ, ಪಕ್ಷದೊಳಗೆ ಎದ್ದಿರುವ ಬಿರುಗಾಳಿಯ ನಡುವೆ ಟ್ರಂಪ್ ಬೆಂಬಲಿಗರು ಹೋರಾಟಕ್ಕೆ ಸಜ್ಜಾಗಿದ್ದಾರೆ.

ತಾನಿನ್ನು ಟ್ರಂಪ್ ಪರವಾಗಿ ಪ್ರಚಾರ ನಡೆಸಲಾರೆ ಎಂಬುದಾಗಿ ರಯಾನ್ ಘೋಷಿಸಿದ ಒಂದು ದಿನದ ಬಳಿಕ, ಅವರ ವಿರುದ್ಧ ರಿಪಬ್ಲಿಕನ್ ಅಭ್ಯರ್ಥಿ ಟ್ವಿಟರ್‌ನಲ್ಲಿ ತಿರುಗಿ ಬಿದ್ದಿದ್ದಾರೆ. ‘‘ರಯಾನ್ ಓರ್ವ ದುರ್ಬಲ ಮತ್ತು ನಿಷ್ಕ್ರಿಯ ವ್ಯಕ್ತಿ ಹಾಗೂ ಅವರು ಪಕ್ಷದ ಅಭ್ಯರ್ಥಿಯಾಗಿ ನನಗೆ ‘ಶೂನ್ಯ ಬೆಂಬಲ’ ನೀಡುತ್ತಿದ್ದಾರೆ’’ ಎಂದಿದ್ದಾರೆ.

‘‘ಈಗ ನಾನು ಸಂಕಲೆಯಿಂದ ಮುಕ್ತನಾಗಿದ್ದೇನೆ. ಅಮೆರಿಕಕ್ಕಾಗಿ ನನಗೆ ಬೇಕಾದಂತೆ ನಾನು ಹೋರಾಡಲು ಮುಕ್ತನಾಗಿದ್ದೇನೆ’’ ಎಂದು ಘೋಷಿಸಿದ್ದಾರೆ.

ಅದೇ ವೇಳೆ, ಮೆಕೇನ್ ಓರ್ವ ‘ಕೆಟ್ಟ ಮಾತುಗಳನ್ನು ಆಡುವ’ ವ್ಯಕ್ತಿ ಎಂದು ಬಣ್ಣಿಸಿರುವ ಟ್ರಂಪ್, ‘‘ನಾನು ಅವರ ಬಳಿ ಬೆಂಬಲ ಬೇಡಿರುವ ಒಂದೇ ಒಂದು ಉದಾಹರಣೆಯೂ ಇಲ್ಲ’’ ಎಂದು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

 ಟ್ರಂಪ್ ಮಹಿಳೆಯರ ಬಗ್ಗೆ ಅಸಹ್ಯವಾಗಿ ಮತ್ತು ಅಶ್ಲೀಲವಾಗಿ ಆಡಿರುವ 2005ರ ವೀಡಿಯೊವೊಂದು ಕಳೆದ ಶುಕ್ರವಾರ ಹೊರಬಿದ್ದ ಬಳಿಕ, 2008ರ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಿದ್ದ ಮೆಕೇನ್ ಟ್ರಂಪ್‌ಗೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದರು.

ಕನ್ಸರ್ವೇಟಿವ್‌ಗಳು ದ್ವೇಷಿಸುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರನ್ನು ಎದುರಿಸುವುದೂ ತನ್ನ ಪಕ್ಷಕ್ಕೆ ಕಷ್ಟವಾಗುತ್ತಿದೆ ಎಂದರು.

‘‘ನಿಷ್ಠೆಯಿಲ್ಲದ ‘ಆರ್’ (ಆರ್ ಅಕ್ಷರದಿಂದ ಆರಂಭಗೊಳ್ಳುವ ಹೆಸರುಗಳು)ಗಳೊಂದಿಗೆ ವ್ಯವಹರಿಸುವುದು ಕಪಟಿ (ಕ್ರೂಕ್ಡ್) ಹಿಲರಿಯೊಂದಿಗೆ ವ್ಯವಹರಿಸುವುದಕ್ಕಿಂತಲೂ ಕಷ್ಟ’’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಟ್ವಿಟರ್‌ನಲ್ಲಿ ಅವರಿಗೆ 1.2 ಕೋಟಿಗೂ ಅಧಿಕ ಅನುಯಾಯಿಗಳಿದ್ದಾರೆ

ರಯಾನ್‌ಗೆ ಪರೋಕ್ಷ ಬೆದರಿಕೆ
‘‘ಒಂದೇ ಮನೆಯಲ್ಲಿ ಈ ಜನರೊಂದಿಗೆ ನಾನು ಇರಲು ಬಯಸುವುದಿಲ್ಲ, ಅದರಲ್ಲೂ ವಿಶೇಷವಾಗಿ ರಯಾನ್ ಜೊತೆಗೆ. ಇಷ್ಟನ್ನು ನಾನು ಹೇಳಬಲ್ಲೆ’’ ಎಂದು ‘ಫಾಕ್ಸ್ ನ್ಯೂಸ್’ ಚಾನೆಲ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದರು. ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ರಯಾನ್ ‘‘ಬೇರೆಯೇ ಸ್ಥಾನದಲ್ಲಿ ಇರಬಹುದು’’ ಎಂದು ಅವರು ಹೇಳಿದ್ದು, ಇದು ಪರೋಕ್ಷ ಬೆದರಿಕೆಯಾಗಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News