×
Ad

ತೀರ್ಥಹಳ್ಳಿ: ಜನಮನಗೆದ್ದ ದಸರಾ ಉತ್ಸವ

Update: 2016-10-12 21:50 IST

ತೀರ್ಥಹಳ್ಳಿ, ಅ.12: ತೀರ್ಥಹಳ್ಳಿಯ ದಸರಾ ಉತ್ಸವವು ಮೋಡಕವಿದ ವಾತಾವರಣದೊಂದಿಗೆ ಪಟ್ಟಣದ ರಾಮೇಶ್ವರ ದೇವಾಲಯದ ಮುಂಭಾಗದಲ್ಲಿ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುವುದರೊಂದಿಗೆ ಅದ್ದೂರಿಯಾಗಿ ನೆರವೇರಿತು.

ರಾಮೇಶ್ವರ ದೇವಾಲಯದ ಮುಂಭಾಗದಲ್ಲಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ್‌ರಾಮೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಹೂಮಾಲೆ ಹಾಕಿ ಕಹಳೆ ಊದುವುದರೊಂದಿಗೆ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಲೋಕೇಶ್ವರಪ್ಪ, ಸಹಕಾರಿ ರತ್ನ ಡಾ. ಆರ್.ಎಂ.ಮಂಜುನಾಥಗೌಡ, ಸಂಚಾಲಕ ಡಿ.ಎಸ್.ವಿಶ್ವನಾಥ ಶೆಟ್ಟಿ, ಜಿಪಂ, ತಾಪಂ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು.

ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಚಾಮುಂಡೇಶ್ವರಿ ದೇವಿಯ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಕುಶಾವತಿಯ ನೆಹರೂ ಪಾರ್ಕ್‌ನಲ್ಲಿ ಬನ್ನಿ ಮಂಟಪ ತಲುಪಿತು. ಈ ಭವ್ಯ ಮೆರವಣಿಗೆಯಲ್ಲಿ ವಿವಿಧ ವೇಷಭೂಷಣಗಳು, ಕೀಲುಕುದುರೆ ಡ್ಯಾನ್ಸ್, ಡೊಳ್ಳುಕುಣಿತ, ಆಕರ್ಷಕ ಸ್ವಚ್ಛಭಾರತ ಆಂದೋಲನ ಮುಂತಾದ ಟ್ಯಾಬ್ಲೋಗಳು ಆಕರ್ಷಿಸಿತು.

ಬನ್ನಿ ಮಂಟಪದಲ್ಲಿ ಮುಖ್ಯ ಅತಿಥಿಗಳು, ಉದ್ಘಾಟಕರು ಹಾಗೂ ಸಾರ್ವಜನಿಕರು ಬನ್ನಿಯನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಶುಭ ಹಾರೈಸಿದರು.

 ಬನ್ನಿ ಮಂಟಪದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕಿಮ್ಮನೆ ರತ್ನಾಕರ್, ಇತಿಹಾಸ ಹೊಂದಿರುವ ತೀರ್ಥಹಳ್ಳಿಯ ದಸರಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೆರುಗಿನೊಂದಿಗೆ ಸಾಗಿಬಂದಿದೆ. ಈ ಬಾರಿ ರಾಮೇಶ್ವರ ದೇವರು ಮಲೆನಾಡ ರೈತರ ಶ್ರೇಯೋಭಿವೃದ್ಧಿಗೆ ಆಶೀರ್ವದಿಸಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಚಾಲಕ ಡಿ.ಎಸ್.ವಿಶ್ವನಾಥ ಶೆಟ್ಟಿ, ಪಪಂ ಅಧ್ಯಕ್ಷ ಸಂದೇಶ್ ಜವಳಿ ಹಾಗೂ ದಸರಾ ಉತ್ಸವ ಸಮಿತಿ ಹಾಗೂ ಉಪ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದಕ್ಷ ಅಧಿಕಾರಿ ಶಾಂತಾರಾಂ ಐಎಎಸ್, ಶಿಕ್ಷಣ ತಜ್ಞ ಪಿ.ವಿ.ಕೃಷ್ಣಭಟ್, ಧಾರ್ಮಿಕ ಕ್ಷೇತ್ರದ ಎಂ.ಎಂ.ಲಕ್ಷ್ಮೀ ನಾರಾಯಣ್, ವೈದ್ಯಕೀಯ ಕ್ಷೇತ್ರದಲ್ಲಿನ ಡಾ. ವಿನೋದ್‌ಕುಮಾರ್, ಸಮಾಜಸೇವೆಯ ಮಕ್ಕಿಮನೆ ವಿಠೋಬರಾವ್ ಮತ್ತು ಕರ್ನಾಟಕರತ್ನ ವಿಜೇತ ಕ್ರೀಡಾಪಟು ಕೆ.ಸಿ.ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು. ನಂತರ ನಾಡಿನ ಖ್ಯಾತನೃತ್ಯ ತಂಡಗಳಿಂದ ಆಕರ್ಷಣೀಯ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News