×
Ad

ಶಿಕ್ಷಣ ಬದುಕಿನ ನಿರಂತರ ಸಾಧನೆ: ಡಾ.ವಿಶ್ವನಾಥ್

Update: 2016-10-12 21:54 IST

 ಕಡೂರು, ಅ.12: ಭಾರತೀಯ ಇತಿಹಾಸದಲ್ಲಿ ಗುರುವಿಗೆ ಮಹತ್ವದ ಸ್ಥಾನವಿದ್ದು, ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸುತ್ತಾರೆ. ಶಿಕ್ಷಣವೆಂಬುದು ಬದುಕಿನ ಉದ್ದಕ್ಕೂ ನಡೆಯುವ ನಿರಂತರ ಸಾಧನೆ. ಅದೊಂದು ತಪಸ್ಸು ಇದ್ದ ಹಾಗೆ ಎಂದು ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್ ಹೇಳಿದರು. ಅವರು ಕಡೂರಿನ ಶೃಂಗೇರಿ ಶಾರದಾ ಮಠದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಿರಿಗನ್ನಡ ವೇದಿಕೆ, ಕಡೂರು ತಾಲೂಕು ಸಿರಿಗನ್ನಡ ವೇದಿಕೆ, ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಕಡೂರು, ಶೃಂಗೇರಿ ಶ್ರೀ ಶಾರದಾ ಪ್ರತಿಷ್ಠಾನಂ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸಿದ ಗುರುಗಳನ್ನು ಜಿಲ್ಲಾ ಸಿರಿಗನ್ನಡ ವೇದಿಕೆ, ಸಹಯೋಗದಲ್ಲಿ ಅಭಿನಂದಿಸುತ್ತಿರುವುದು ಸ್ವಾಗತಾರ್ಹ ಎಂದರು. ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಗಾಂಧೀಜಿ ಹೇಳಿದಂತೆ ಶಿಕ್ಷಣ ಇರುವುದೇ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣಕ್ಕಾಗಿ. ಗುರುವಿನ ಬಗ್ಗೆ ಹೆದರಿಕೆ ಮತ್ತು ಗೌರವ ಭಾವನೆಗಳೆರಡನ್ನೂ ಶಿಷ್ಯಂದಿರು ಇರಿಸಿಕೊಂಡಿರುತ್ತಾರೆ ಪ್ರತಿಯೊಬ್ಬರೂ ಸಹ ಆದರ್ಶ ಶಿಕ್ಷಕರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂಬುದಾಗಿ ತಿಳಿಸಿದರು.

ಸಮಾಜ ಸೇವಕ ಗಿರೀಶ್ ಉಪ್ಪಾರ್ ಗುರುವಂದನಾ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರ ಅನಾವರಣ ಮಾಡಿದರು.

ಸರಕಾರಿ ಪಿಯು ಕಾಲೇಜು ನಿವೃತ್ತ ಪ್ರಾಂಶುಪಾಲ ಎಲ್.ಪುಟ್ಟಕರಿಯಪ್ಪ, ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ವಿ. ರುದ್ರೇಗೌಡ ಹಾಗೂ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶೀಲಾ ನಂಜುಂಡಪ್ಪ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.

ಕಡೂರಿನ ಶೃಂಗೇರಿ ಶಾರದಾ ಪ್ರತಿಷ್ಠಾನಂ ಅಧ್ಯಕ್ಷ ಕೆ.ಸಿ. ದತ್ತಾತ್ರಿ, ಕಡೂರು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಸಿ. ರೇವಣಸಿದ್ದಪ್ಪ, ಕಡೂರು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಸವಿತಾ ಸತ್ಯನಾರಾಯಣ ಮಾತನಾಡಿದರು. ಸಿಂಗಟಗೆರೆ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಂಚಾಲಕ ಬಸವರಾಜು, ಕಡೂರು ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕುಪ್ಪಾಳು ಶಾಂತಮೂರ್ತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಮುಗುಳಿಕಟ್ಟೆ ಲೋಕೇಶ್, ಬ್ಯಾಗಡೇಹಳ್ಳಿ ಬಸವರಾಜು ಉಪಸ್ಥಿತರಿದ್ದರು.

ತಾಲೂಕು ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಬಿ. ವೆಂಕಟೇಶ್ ಸ್ವಾಗತಿಸಿದರು. ಶಿಕ್ಷಕ ನಾಗರಾಜಪ್ಪ ವಂದಿಸಿದರು. ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News