ಮಹಿಷ ದಹನದ ಪರಿಪಾಠ ಬಿಡದಿದ್ದರೆ ಉಗ್ರ ಹೋರಾಟ: ಬಿಎಸ್ಪಿ ಎಚ್ಚರಿಕೆ
ಮೂಡಿಗೆರೆ, ಅ.12: ದಸರಾ ಹಬ್ಬದ ಅಂಗವಾಗಿ ವಿಜಯದಶಮಿ ದಿನ ಚಕ್ರವರ್ತಿ ಮಹಿಷನನ್ನು ರಾಕ್ಷಸನನ್ನಾಗಿ ಚಿತ್ರಿಸಿ ಬೆಂಕಿಗಾಹುತಿ ಮಾಡುವ ಪರಿಪಾಠವನ್ನು ಕೈ ಬಿಡದಿದ್ದರೆ ಮುಂಬರುವ ವರ್ಷದಿಂದ ಉಗ್ರ ಹೋರಾಟ ನಡೆಸುವುದಾಗಿ ಬಿಎಸ್ಪಿ ಪಕ್ಷದ ಮುಖಂಡ ಲೋಕವಳ್ಳಿ ರಮೇಶ್ ಎಚ್ಚರಿಕೆ ನೀಡಿದರು.
ವಿಜಯದಶಮಿ ದಿನ ಮೂಡಿಗೆರೆ ಲಯನ್ಸ್ ವೃತ್ತದ ಬಳಿ ಶ್ರೀ ದುರ್ಗಾ ಸೇವಾ ಸಮಿತಿಯು ಮಹಿಷ ಎನ್ನುವ ಪ್ರತಿಕೃತಿಯನ್ನು ರಾಕ್ಷಸನಂತೆ ಚಿತ್ರಿಸಿ ಬೆಂಕಿಗಾಹುತಿ ಮಾಡಲು ಹೊರಟಿದ್ದಾಗ ಮಧ್ಯ ಪ್ರವೇಶಿಸಿ ಅವರು ಮಾತನಾಡಿದರು.
ಇತಿಹಾಸದ ಪ್ರಕಾರ ಮಹಿಷ ಒಂದು ಪ್ರಾಂತ್ಯದ ಮಹಾರಾಜನಾಗಿದ್ದ. ಅವನು ಆಳುತ್ತಿದ್ದ ಆ ಪ್ರಾಂತ್ಯಕ್ಕೆ ಮೈಸೂರು ಎಂಬ ಹೆಸರು ಬಂದಿದೆ. ದಕ್ಷ ಆಡಳಿತ ಅಧಿಕಾರಿ ಆಗಿದ್ದ ಮಹಿಷನನ್ನು ಆರ್ಯ ಸಂಸ್ಕೃತಿಯವರು ಮೋಸದಿಂದ ಕೊಲೆ ಮಾಡಿದ್ದಾರೆ. ಮಹಿಷ ಮಹರಾಜನೇ ಹೊರತು ರಾಕ್ಷಸನಲ್ಲ ಎಂದು ಹೇಳಿದರು.
ಮೂಲ ನಿವಾಸಿಯಾಗಿರುವ ಮಹಿಷ ದಲಿತ, ಹಿಂದುಳಿದ ವರ್ಗದವರಿಗೆ ತಳಹದಿಯನ್ನು ರೂಪಿಸಿದವರಾಗಿದ್ದಾರೆ. ಮಹಿಷರನ್ನು ರಾಕ್ಷಸರನ್ನಾಗಿ ಚಿತ್ರಿಸಿ ಬೆಂಕಿಗಾಹುತಿ ಮಾಡುವುದರಿಂದ ದಲಿತ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರುಗಳ ಭಾವನೆಗಳನ್ನು ಕದಡಿದಂತಾಗುತ್ತದೆ. ಇಂತಹ ಕೃತ್ಯವನ್ನು ಎಂದಿಗೂ ಸಹಿಸುವುದಿಲ್ಲ. ಭವಿಷ್ಯದಲ್ಲಿ ಇಂತಹ ಕೃತ್ಯಗಳು ಮರುಕಳಿಸಬಾರದು ಎಂದು ಎಚ್ಚರಿಸಿದರು.
ಈ ವೇಳೆ ದುರ್ಗಾ ಸಮಿತಿಯು ಮಹಿಷನ ಪ್ರತಿಕೃತಿಯನ್ನು ಸುಡಲು ಮುಂದಾಗಿದ್ದು, ದಲಿತ ಸಂಘಟನೆಗಳ ಮಧ್ಯ ಪ್ರವೇಶದಿಂದ ಮಹಿಷನ ಪ್ರತಿಕೃತಿಯಲ್ಲಿದ್ದ ನಾಗ ಮತ್ತು ಖಡ್ಗವನ್ನು ತೆಗೆದು ಬೆಂಕಿಗಾಹುತಿ ಮಾಡುವುದಾಗಿ ಸಮಿತಿಯ ಮುಖಂಡರು ಮನವಿ ಮಾಡಿಕೊಂಡರು. ಮುಂದಿನ ವರ್ಷದಿಂದ ಮಹಿಷನನ್ನು ರಾಕ್ಷಸನನ್ನಾಗಿ ಚಿತ್ರಿಸಿ ಪ್ರತಿಕೃತಿ ದಹಿಸುವುದಿಲ್ಲ ಎಂದು ಹೇಳಿದ್ದರಿಂದ ಕೇವಲ ಪ್ರತಿಕೃತಿ ಮಾತ್ರ ದಹಿಸಲು ಅವಕಾಶ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬೆಟ್ಟಗೆರೆ ಶಂಕರ್, ಬಕ್ಕಿ ಮಂಜು, ರವಿ, ದಾರದಹಳ್ಳಿ ಡಿ.ಇ.ಜಗದೀಶ್, ಸುಮಿತ್ರ, ಸಿದ್ದೇಶ್ ಮತ್ತಿತರರು ಇದ್ದರು.