ಶಿವಮೊಗ್ಗ-ಭದ್ರಾವತಿಗೆ ಸೀಮಿತವಾದ ನರ್ಮ್ ಬಸ್
ಶಿವಮೊಗ್ಗ, ಅ. 12: ರಾಜ್ಯ ಸರಕಾರ ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ನರ್ಮ್ ಯೋಜನೆಯಡಿ ಸರಕಾರಿ ಸಿಟಿಬಸ್ ಸಂಚಾರ ಆರಂಭಿಸಿದಾಗ ನಾಗರಿಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಎರಡೂ ನಗರಗಳ ಎಲ್ಲ ಬಡಾವಣೆಗಳಿಗೂ ಸರಕಾರಿ ಸಿಟಿ ಬಸ್‌ಗಳ ಸೇವೆ ಲಭ್ಯವಾಗುವ ವಿಶ್ವಾಸವಿತ್ತು. ಆದರೆ, ಪ್ರಸ್ತುತ ಓಡುತ್ತಿರುವ ಸರಕಾರಿ ಸಿಟಿ ಬಸ್‌ಗಳ ಪರಿಸ್ಥಿತಿ ಗಮನಿಸಿದರೆ, ಎರಡೂ ನಗರಗಳ ನಾಗರಿಕರಲ್ಲಿ ಮನೆ ಮಾಡಿದ್ದ ನಿರೀಕ್ಷೆಗಳು ಹುಸಿಗೊಳ್ಳುವಂತೆ ಮಾಡಿದೆ.
ಹೊರವಲಯದ ಪ್ರದೇಶಗಳಿಗೆ ಓಡಬೇಕಾದ ಮುಕ್ಕಾಲು ಪಾಲು ಸರಕಾರಿ ಸಿಟಿ ಬಸ್‌ಗಳು ಶಿವಮೊಗ್ಗ- ಭದ್ರಾವತಿ ನಗರಗಳ ನಡುವೆ ಸಂಚರಿಸುತ್ತಿವೆ. ಶಿವಮೊಗ್ಗ ಡಿಪೋದ 10 ಹಾಗೂ ಭದ್ರಾವತಿ ಡಿಪೋದ 8 ಬಸ್‌ಗಳು ಈ ಎರಡು ನಗರಗಳ ನಡುವೆ ಓಡಾಡುತ್ತಿವೆ ಎಂದು ಕೆಎಸ್ಸಾರ್ಟಿಸಿಯ ಮೂಲಗಳು ಬಹಿರಂಗ ಪಡಿಸಿವೆ.
ರಸ್ತೆಗಳು ಕಿರಿದಾಗಿರುವ ಕಾರಣ ಲಾಂಗ್ ಚೆಸ್ಸಿನ ಸರಕಾರಿ ಸಿಟಿ ಬಸ್‌ಗಳನ್ನು ಶಿವಮೊಗ್ಗ -ಭದ್ರಾವತಿ ನಗರಗಳ ನಡುವೆ ಓಡಿಸಲಾಗುತ್ತಿವೆ. ಮಿನಿ ಬಸ್‌ಗಳನ್ನು ಮಾತ್ರ ವಿವಿಧ ಬಡಾವಣೆಗಳಿಗೆ ಓಡಿಸಲಾಗುತ್ತಿವೆ ಎಂದು ಕೆಎಸ್ಸಾರ್ಟಿಸಿ ಸಂಸ್ಥೆ ಕುಂಟು ನೆಪ ಮುಂದಿಡುತ್ತಾ ಸಮಜಾಯಿಷಿ ನೀಡುತ್ತಿದೆ. ಆದರೆ, ಕೆಎಸ್ಸಾರ್ಟಿಸಿಯ ಕುಂಟು ನೆಪಕ್ಕೆ ಎರಡೂ ನಗರಗಳ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಸಂಸ್ಥೆಗೆ ಸರಕಾರಿ ಸಿಟಿ ಬಸ್ ಓಡಿಸುವ ಆಸಕ್ತಿಯಿದ್ದಂತೆ ಕಾಣುತ್ತಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಬೇಡಿಕೆಯಿದೆ: ಶಿವಮೊಗ್ಗ ನಗರದಲ್ಲಿ 65 ಹಾಗೂ ಭದ್ರಾವತಿಯಲ್ಲಿ 35 ಸರಕಾರಿ ಸಿಟಿ ಬಸ್ ಓಡಿಸಲು ಜೆನ್ ನರ್ಮ್ ಯೋಜನೆಯಡಿ ಅನುಮತಿ ದೊರೆತಿದೆ. ಆದರೆ, ಪ್ರಥಮ ಹಂತದಲ್ಲಿ ರಾಜ್ಯ ಸರಕಾರವು ಶಿವಮೊಗ್ಗಕ್ಕೆ 20 ಹಾಗೂ ಭದ್ರಾವತಿಗೆ 10 ಬಸ್‌ಗಳನ್ನು ನೀಡಿವೆ. ಶಿವಮೊಗ್ಗಕ್ಕೆ ಸಂಬಂಧಿಸಿದಂತೆ 10 ಮಿನಿ ಬಸ್‌ಗಳಾಗಿದ್ದು, ಉಳಿದ 10 ಬಸ್ ಲಾಂಗ್ ಚೆಸ್ಸಿನ ಬಸ್‌ಗಳು. ಭದ್ರಾವತಿಯಲ್ಲಿ ಈಗಾಗಲೇ ಪ್ರತ್ಯೇಕ ಡಿಪೋ, ಬಸ್ ನಿಲ್ದಾಣ ನಿರ್ಮಾಣವಾಗಿದೆ. ಆದರೆ, ಶಿವಮೊಗ್ಗ ನಗರದಲ್ಲಿ ಇಲ್ಲಿಯವರೆಗೂ ಈ ಪ್ರಕ್ರಿಯೆಯೇ ಆರಂಭವಾಗಿಲ್ಲ ಎಂದು ಜನತೆ ದೂರಿದ್ದಾರೆ.
20 ಕಿ.ಮೀ.ವರೆಗೆ ಸರಕಾರಿ ಸಿಟಿ ಬಸ್ ಓಡಿಸಲು ಅವಕಾಶವಿದೆ. ಪ್ರಸ್ತುತ ಶಿವಮೊಗ್ಗ ನಗರದ ಹೊರವಲಯ, ಖಾಸಗಿ ಸಿಟಿ ಬಸ್ ಓಡದ ಬಡಾವಣೆ, ಗ್ರಾಮಗಳ ನಿವಾಸಿಗಳು ತಮ್ಮ ಪ್ರದೇಶಗಳಿಗೆ ಸರಕಾರಿ ಸಿಟಿ ಬಸ್ ಓಡಿಸುವಂತೆ ಸಾಲುಸಾಲಾಗಿ ಜಿಲ್ಲಾಡಳಿತ ಹಾಗೂ ಕೆಎಸ್ಸಾರ್ಟಿಸಿ ಸಂಸ್ಥೆಗೆ ಮನವಿ ಮಾಡುತ್ತಿದ್ದಾರೆ. ಆದರೆ ಕೆಎಸ್ಸಾರ್ಟಿಸಿ ಸಂಸ್ಥೆ ಮಾತ್ರ ನಾಗರಿಕರ ಮನವಿಗೆ ಸ್ಪಂದಿಸುವ ಗೋಜಿಗೇ ಹೋಗಿಲ್ಲ.
ಒಟ್ಟಾರೆ ಜಿಲ್ಲಾಡಳಿತ ಹಾಗೂ ಕೆಎಸ್ಸಾರ್ಟಿಸಿ ಸಂಸ್ಥೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಶಿವಮೊಗ್ಗ-ಭದ್ರಾವತಿ ನಡುವೆ ಓಡುತ್ತಿರುವ ಲಾಂಗ್ ಚೆಸ್ಸಿನ 18 ಬಸ್‌ಗಳನ್ನು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿಗಳಿಗೆ ಹೊಂದಿಕೊಂಡಂತಿರುವ ಬಡಾವಣೆ, ಹೊರವಲಯದ ಪ್ರದೇಶ, ಗ್ರಾಮಗಳಲ್ಲಿಯೂ ಓಡಿಸಲು ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಆಗಮಿಸಲಿವೆ ಮತ್ತೆ 20 ಬಸ್‌ಗಳು
ಶಿ
ವಮೊಗ್ಗ ನಗರದಲ್ಲಿ 65 ಸರಕಾರಿ ಸಿಟಿ ಬಸ್ ಓಡಿಸಲು ಅನುಮತಿ ನೀಡಲಾಗಿದೆ. ಪ್ರಥಮ ಹಂತದಲ್ಲಿ ರಾಜ್ಯ ಸರಕಾರ 20 ಬಸ್‌ಗಳನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದಲ್ಲಿ ಮತ್ತೆ 20 ಬಸ್‌ಗಳನ್ನು ನಗರದ ನಾಗರಿಕರ ಸೇವೆಗೆ ಸಮರ್ಪಣೆ ಮಾಡಲು ಮುಂದಾಗಿದೆ. ಇಷ್ಟರಲ್ಲಿಯೇ ಈ ಬಸ್‌ಗಳು ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಕೆಎಸ್ಸಾರ್ಟಿಸಿಯ ಮೂಲಗಳು ಮಾಹಿತಿ ನೀಡಿವೆ. ಶಿವಮೊಗ್ಗ ನಗರದಲ್ಲಿ ಮೊದಲಿನಿಂದಲೂ ಸರಕಾರಿ ಸಿಟಿ ಬಸ್ ಆರಂಭವಾಗದಂತೆ ಕಾಣದ ಕೈಗಳು ವ್ಯವಸ್ಥಿತ ಹುನ್ನಾರ ನಡೆಸಿಕೊಂಡು ಬಂದವು. ನಾಗರಿಕರ ಒತ್ತಡಕ್ಕೆ ಮಣಿದು ಇದೀಗ ಬಸ್‌ಗಳ ಸಂಚಾರ ಆರಂಭವಾಗಿವೆ. ಆದರೆ, ಈ ಬಸ್‌ಗಳ ಸೇವೆಯನ್ನೂ ವ್ಯವಸ್ಥಿತವಾಗಿ ಹಳ್ಳ ಹಿಡಿಸುವ ಕುತಂತ್ರಗಳು ನಡೆಯುತ್ತಿವೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪದ ನೀಡಬಾರದು. ಸರಕಾರಿ ಸಿಟಿ ಬಸ್‌ಗಳ ಸೇವೆ ಪರಿಣಾಮಕಾರಿಯಾಗಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡಬೇಕಾಗಿದೆ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
ಪಾಸ್ ಸೌಲಭ್ಯ ಆರಂಭವಾಗಿಲ್ಲ
ಸ
ರಕಾರಿ ಸಿಟಿ ಬಸ್‌ಗಳು ಆರಂಭವಾದರೆ ವಿದ್ಯಾರ್ಥಿಗಳು, ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ ಲಭ್ಯವಾಗುವುದಾಗಿ ಹೇಳಲಾಗಿತ್ತು. ಆದರೆ, ಇಲ್ಲಿಯವರೆಗೂ ಕೆಎಸ್ಸಾರ್ಟಿಸಿ ಸಂಸ್ಥೆ ಪಾಸ್ ಸೌಲಭ್ಯವನ್ನು ಆರಂಭಿಸಿಲ್ಲ. ಇದರಿಂದ ಸರಕಾರ ಪ್ರಕಟಿಸುವ ರಿಯಾಯಿತಿ ಪ್ರಯಾಣ ಸೌಲಭ್ಯ ನಾಗರಿಕರಿಗೆ ಲಭ್ಯವಾಗದಂತಾಗಿದೆ. ಇದು ಪ್ರಯಾಣಿಕರಲ್ಲಿ ತೀವ್ರ ನಿರಾಸೆ ಉಂಟು ಮಾಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಸಂಚರಿಸುತ್ತಿರುವ ಸರಕಾರಿ ಸಿಟಿ ಬಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾ ವಣೆ ತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಎರಡೂ ನಗರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್‌ಗಳನ್ನು ಓಡಿಸಬೇಕು. ಪಾಸ್ ವ್ಯವಸ್ಥೆ ಆರಂಭಿಸಬೇಕು. ಡಿಪೋ, ಬಸ್ ಶೆಲ್ಟರ್, ವರ್ಕ್‌ಶಾಪ್ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಬಸ್ ಓಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸ್ಥಳೀಯ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸ ಮಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಹಳ್ಳ ಹಿಡಿಸುವ ಯತ್ನ
ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಸ್ತುತ ಓಡುತ್ತಿರುವ 10 ಸರಕಾರಿ ಸಿಟಿ ಬಸ್‌ಗಳೂ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಓಡುತ್ತಿವೆ. ಸರಕಾರದ ರಿಯಾಯಿತಿ ಪ್ರಯಾಣ ದರದ ಸೌಲಭ್ಯವೂ ದೊರಕುತ್ತಿಲ್ಲ. ಪಾಸ್ ವ್ಯವಸ್ಥೆ ಇಲ್ಲಿಯವರೆಗೂ ಆರಂಭವಾಗಿಲ್ಲ. ಇದೆಲ್ಲವನ್ನು ಗಮನಿಸಿದರೆ ಸರಕಾರಿ ಸಿಟಿ ಬಸ್ ವ್ಯವಸ್ಥೆಯನ್ನೇ ಹಳ್ಳ ಹಿಡಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿರುವ ಅನುಮಾನಗಳು ಮೂಡುತ್ತವೆ ಎಂದು ವಿನೋಬ ನಗರದ ಶಂಕರ್ ಎಂಬವರು ದೂರಿದ್ದಾರೆ.