ನಡವಳಿಕೆ ತಿದ್ದಿಕೊಳ್ಳಿ: ಈಶ್ವರಪ್ಪಗೆ ಪುಟ್ಟಸ್ವಾಮಿ ಖಡಕ್ ಎಚ್ಚರಿಕೆ
ಕಡೂರು, ಅ.12: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹಾಗೂ ಹಿಂದುಳಿದ ವರ್ಗ ಮೋರ್ಚಾಕ್ಕೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಕೇಂದ್ರದ ನಾಯಕರು ಈಶ್ವರಪ್ಪನವರಿಗೆ ಬ್ರಿಗೇಡ್ ಸ್ಥಗಿತಗೊಳಿಸುವಂತೆ ತಿಳಿಹೇಳಿದ್ದಾರೆ. ಈಶ್ವರಪ್ಪನವರು ತನ್ನ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಕಾರ್ಯನಿಮಿತ್ತ ಚಿಕ್ಕಮಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಕಡೂರು ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 206ರ ಸಮಾಜ ಕಲ್ಯಾಣ ಇಲಾಖೆ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಾಗಿದ್ದು, ಕ್ಷೇತ್ರವಾರು ಸಮಿತಿಗಳನ್ನು ಈಗಾಗಲೇ ರಚಿಸಲಾಗಿದೆ. ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಇಡೀ ರಾಜ್ಯದಲ್ಲಿ ಶಕ್ತಿಯುತವಾಗಿದೆ. ಬಿಜೆಪಿಯ ಯಾವುದೇ ಗುಂಪುಗಾರಿಕೆ ಇಲ್ಲ. ಈಶ್ವರಪ್ಪನವರು ದ್ವಂದ್ವ ನಿಲುವನ್ನು ಬಿಟ್ಟು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಎಂದರು.
ಸಿದ್ಧರಾಮಯ್ಯ ಅವರ ಸರಕಾರ ಸಂಪೂರ್ಣವಾಗಿ ಹಿ ಂದುಳಿದ ವರ್ಗದವರ ವಿರೋಧಿಯಂತೆ ನಡೆದು ಕೊಳ್ಳುತ್ತಿದೆ. ಬಿಜೆಪಿ ಸರಕಾರ ಅಧಿಕಾರ ಅವಧಿಯಲ್ಲಿ ಮಾಡಿದ್ದ ಹಲವಾರು ಹಿಂದುಳಿದ ವರ್ಗದವರ ಕಾರ್ಯಗಳನ್ನು ಮುಂದು ವರಿಸದೆ ಸ್ಥಗಿತಗೊಳಿಸಲಾಗಿದೆ. ಸರಕಾರ ಹಿಂದುಳಿದ ವರ್ಗದವರಿಗೆ ಮೀಸಲಿಟ್ಟ ಅನುದಾನದಲ್ಲಿ ಕೇವಲ ಶೇ. 35ನ್ನು ಖರ್ಚು ಮಾಡಿ ಉಳಿದ ಶೇ. 65ನ್ನು ಖರ್ಚು ಮಾಡದೆ ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸ ರಿಸುತ್ತಿದೆ. ಮೊರಾರ್ಜಿ ವಸತಿ ಶಾಲೆಗೆ ಹಣ ನೀಡುತ್ತಿಲ್ಲ. ನರ್ಸಿಂಗ್ ವಿದ್ಯಾರ್ಥಿಗಳಿಗೆ ವೇತನ ನೀಡುತ್ತಿಲ್ಲ. ಹಿಂದುಳಿದ ವರ್ಗಗಳ ಯಾವುದೇ ಸಮುದಾಯ ಭವನಗಳಿಗೆ ಹಣ ನೀಡುತ್ತಿಲ್ಲ ಎಂದು ಆಪಾದಿಸಿದರು.
ಸಿದ್ದರಾಮಯ್ಯ ಹಿಂದುಳಿದವರ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅವರ ಮಂತ್ರಿ ಮಂಡಲದ ಎಲ್ಲಾ ಸಚಿವರೂ ಭ್ರಷ್ಟಾಚಾರಿಗಳು. ಇವರ ಭ್ರಷ್ಟಾಚಾರ ಮುಚ್ಚಿ ಹಾಕಲು ಲೋಕಾಯುಕ್ತವನ್ನು ಹಾಳು ಮಾಡಿ, ಎಬಿಸಿಯನ್ನು ರಚಿಸಲಾಗಿದೆ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಗಿರೀಶ್ ಉಪ್ಪಾರ್, ಪುರಸಭೆ ಉಪಾಧ್ಯಕ್ಷ ರಾಜೇಶ್, ಮುಖಂರಾದ ರವಿ, ಪ್ರಭು ಕುಮಾರ್, ಮಹೇಶ್ವರಪ್ಪ, ಬಸವನಹಳ್ಳಿ ಕುಮಾರ್, ಹೊಗರೇಹಳ್ಳಿ ಚಂದ್ರಪ್ಪ, ಬಸವನಹಳ್ಳಿ ಸತೀಶ್, ಚಿಕ್ಕವೀರಪ್ಪ, ಲಿಂಗ್ಲಾಪುರ, ರಂಗಪ್ಪಗೌಡನಕಟ್ಟೆಹಳ್ಳಿ, ಈಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.