ವರಿಷ್ಠರಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ಈಶ್ವರಪ್ಪ: ಬ್ರಿಗೇಡ್ ಮುಂದುವರಿಸಲು ಪಟ್ಟು
ದಾವಣಗೆರೆ, ಅ.12: ದಲಿತ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಬ್ರಿಗೇಡ್ ಸಹಕರಿಸಲಿದ್ದು, ರಾಜಕೀಯೇತರವಾಗಿ ಮುಂದುವರಿಯಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ರವೀಂದ್ರನಾಥ್ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಹಿಂದುಳಿದ ಸ್ವಾಮೀಜಿಗಳ ಸೂಚನೆ ಮೇರೆಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ರಾಜಕೀಯೇತರವಾಗಿ ಬೆಳೆಸಲು ನಿರ್ಧರಿಸಿದ್ದು, ಅಂತೆಯೇ ಮುಂದುವರಿಯಲಿದೆ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ತಳಮಳ : ಬ್ರಿಗೇಡ್ ಸಂಘಟಿಸಿದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಆರಂಭವಾಗಿದೆ. ಇಲ್ಲಿಯವರೆಗೆ ದಲಿತ ಮತ್ತು ಹಿಂದುಳಿದವರನ್ನು ತಮ್ಮ ಆಸ್ತಿ ಎಂಬುದಾಗಿ ಅವರು ಭಾವಿಸಿದ್ದರು. ಇದೀಗ ಹಿಂದುಳಿದವರು ಹಾಗೂ ದಲಿತರು ಸಂಘಟಿತರಾಗುತ್ತಿರುವುದನ್ನು ಕಂಡು ಕಾಂಗ್ರೆಸ್ಸಿಗರು ಕಳವಳಗೊಂಡಿದ್ದಾರೆ ಎಂದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕೆಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಕ್ಕೆ ಸಹಕರಿಸಬೇಕೆಂಬ ಷರತ್ತಿನೊಂದಿಗೇ ತಾವು ಬ್ರಿಗೇಡ್ ಜೊತೆ ಕೈ ಜೋಡಿಸಿದ್ದೆವು. ಆದರೆ, ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರರು ಸಂಗೊಳ್ಳಿ ರಾಯಣ್ಣ ಬ್ರಿಗೇಡ ನ್ನು ರಾಜಕೀಯೇತರ ಸಂಘಟನೆ ಮಾಡಿದಲ್ಲಿ ಮಾತ್ರ ಸಹಕರಿಸುವುದಾಗಿ ಹೇಳಿದ್ದಾರೆ ಎಂದರು.
ಸಮಸ್ಯೆ ಬಗೆಹರಿಸಿಕೊಳ್ಳಲು ಪಕ್ಷದ ವರಿಷ್ಠ ರಾಮಲಾಲ್‌ಜಿ ಸೂಚಿಸಿದ್ದಾರೆ. ಅದರಂತೆ, ಯಡಿಯೂರಪ್ಪಜೊತೆಗೆ ಶೀಘ್ರವೇ ಮಾತುಕತೆ ನಡೆಸಲಾಗುವುದು. ಹಲವು ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ಏಕಪಕ್ಷೀಯವಾಗಿ ಆಯ್ಕೆ ಮಾಡಿರುವ ವಿಚಾರವೂ ಚರ್ಚೆಗೆ ಬರಲಿದೆ ಎಂದು ಅವರು ನುಡಿದರು.
ಈ ಸಂದರ್ಭ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ರಾ. ಎಂ. ಬಸವರಾಜ ನಾಯ್ಕ, ಡಿ.ಬಿ.ಗಂಗಪ್ಪ, ಮುಖಂಡರಾದ ಬಿ.ಲೋಕೇಶ, ಶಾಮನೂರು ಲಿಂಗರಾಜ, ಬಿ.ಎಸ್.ಜಗದೀಶ, ಧನಂಜಯ ಕಡ್ಲೇಬಾಳ್, ಕೆ.ಎನ್.ಓಂಕಾರಪ್ಪ, ಬಿ.ಎಂ. ಸತೀಶ, ಲಿಂಗರಾಜ ಗೌಳಿ, ಹರಿಹರದ ವೀರೇಶ ಹನಗವಾಡಿ, ಚನ್ನಗಿರಿಯ ಶಿವಕುಮಾರ್, ಹೊನ್ನಾಳಿಯ ಎ.ಬಿ. ಹನುಮಂತಪ್ಪ ಮತ್ತಿತರರು ಹಾಜರಿದ್ದರು.