×
Ad

ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ಪ್ರತಿಭಟನೆ

Update: 2016-10-13 22:04 IST

ಚಿಕ್ಕಮಗಳೂರು, ಅ.13: ಭದ್ರಾವತಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಅವರ ನೇತೃತ್ವದಲ್ಲಿ ಆಝಾದ್ ಪಾರ್ಕ್ ವೃತ್ತದ ಬಳಿ ಮಾನವ ಸರಪಳಿ ರಚಿಸಿ, ಧರಣಿ ನಡೆಸಿದ ಕಾರ್ಯಕರ್ತರು ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ, ಬಾಬಾ ಸಾಹೇಬರ ಪುತ್ಥಳಿಗೆ ಅಪಮಾನ ಮಾಡುವ ಮೂಲಕ ಕಿಡಿಗೇಡಿಗಳು ಸಂವಿಧಾನಕ್ಕೆ, ದೇಶಕ್ಕೆ ಮತ್ತು ನಮ್ಮ ಸಂಸ್ಕೃತಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಮಿತಿಯ ಮಹಿಳಾ ವಿಭಾಗದ ರಾಜ್ಯ ಸಂಘಟನಾ ಸಂಚಾಲಕಿ ಶಶಿಕಲಾ ಮಾತನಾಡಿ, ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದವರನ್ನು ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡ ಆರ್.ಆರ್. ಮಹೇಶ್, ಗುರುಶಾಂತಪ್ಪ ಮಾತನಾಡಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕೆ.ಸಿ.ವಸಂತ ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ, ವಿ.ಧರ್ಮೆಶ್, ತಾಲೂಕು ಸಂಘಟನಾ ಸಂಚಾಲಕ ಯು.ಸಿ.ರಮೇಶ್, ತರೀಕೆರೆ ತಾಲೂಕು ಸಂಚಾಲಕ ಎಚ್.ವಿ.ಬಾಲರಾಜ್, ಮೂಡಿಗೆರೆ ತಾಲೂಕು ಸಂಚಾಲಕ ಲೋಕವಳ್ಳಿ ಮಂಜುನಾಥ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News