ಭಾರತ ಜ್ಞಾನದ ಶ್ರೀಮಂತಿಕೆತುಂಬಿರುವ ದೇಶ: ಡಾ.ಸಿ.ಕೆ.ಸುಬ್ರಾಯ
ಚಿಕ್ಕಮಗಳೂರು, ಅ.13: ಭಾರತ ವಿಶ್ವದಲ್ಲಿಯೇ ಹೆಚ್ಚು ಇಂಜಿನಿಯರ್‌ಗಳನ್ನು ತಯಾರು ಮಾಡುವ ದೇಶ ಎಂದು ಆದಿಚುಂಚನಗಿರಿ ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಿನ್ಸಿಪಾಲ್ ಡಾ.ಸಿ.ಕೆ.ಸುಬ್ರಾಯ ತಿಳಿಸಿದರು.
ಅವರು ನಗರದ ಮುಕ್ತ ಸಂವಾದ ವೇದಿಕೆ ಸೂರಂಕಣ ವತಿಯಿಂದ ಯುರೇಕಾ ಅಕಾಡಮಿಯಲ್ಲಿ ಆಯೋಜಿಸಿದ್ದ ‘ತಾಂತ್ರಿಕ ಶಿಕ್ಷಣ ಸವಾಲುಗಳು’ ಕುರಿತ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಿಟಿಷರ ಆಡಳಿತದ ಕಾಲದಲ್ಲಿ ಪ್ರಧಾನ ಇಂಜಿನಿಯರ್ ಹುದ್ದೆ ಭಾರತೀಯರಿಗೆ ಸಿಗುತ್ತಿರಲಿಲ್ಲ. ಆದರೆ ವಿಶ್ವೇಶ್ವರಯ್ಯನವರಂಥ ಮೇಧಾವಿಯನ್ನು ಮೈಸೂರು ಅರಸರು ಗೌರವಿಸಿದರು. ಅದು ಭಾರತೀಯ ತಾಂತ್ರಿಕ ರಂಗಕ್ಕೆ ಸಂದ ಮಹಾ ಗೌರವ ಎಂದು ಹೇಳಿದರು.
ಭಾರತ ಮಾಹಿತಿ ತಂತ್ರಜ್ಞಾನದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಇಲ್ಲಿ ಐ.ಟಿ ಎಂದರೆ ಇಂಡಿಯನ್ ಟ್ಯಾಲೆಂಟ್ಸ್ ಎಂದೂ ಅಂದುಕೊಳ್ಳಬಹುದು. ಜ್ಞಾನದ ಶ್ರೀಮಂತಿಕೆಯಿಂದ ನಾವು ಗೌರವವನ್ನು ಪಡೆಯುತ್ತಿದ್ದೇವೆಯೇ ಹೊರತು ವಸ್ತುಗಳಿಂದಲ್ಲ.
ತಂತ್ರಜ್ಞಾನ, ತಾಂತ್ರಿಕ ಶಿಕ್ಷಣದಿಂದಾಗಿಯೇ ಭಾರತ ವಿಶ್ವವನ್ನು ತನ್ನೆಡೆಗೆ ಸೆಳೆಯುತ್ತಿರುವುದು ಸುಸ್ಪಷ್ಟ. ಇ-ತಂತ್ರಜ್ಞಾನವು ಪ್ರತಿ ಸೆಕ್ಟರ್‌ನಲ್ಲಿ ಇರುವುದರಿಂದ ಪ್ರತಿಕ್ಷಣವೂ ಹೊಸ ಹೊಸ ವಿಚಾರಗಳು ಸೃಷ್ಟಿಯಾಗುತ್ತಿವೆ. ಇ-ತಂತ್ರಜ್ಞಾನವನ್ನು ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳು ಚೆನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ನುಡಿದರು.
2020ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಎಲ್ಲ ಕ್ಷೇತ್ರಗಳಲ್ಲೂ ಕಾಣಬಯಸಿದ್ದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಕನಸನ್ನು ನಾವೆಲ್ಲ ನನಸು ಮಾಡಬೇಕಾಗಿದೆ. ಮಂಗಳನಲ್ಲಿಗೆ ನೌಕೆ ಕಳಿಸಿದ ನಮಗೆ ಇದು ಕಷ್ಟವಾಗದ ಸಂಗತಿ ಎಂದು ಹೇಳಿದರು.
2016ನೆಯ ಸಾಲಿನ ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪಡೆದ ಚೌಳಹಿರಿಯೂರಿನ ಜಾನಪದ ಗಾಯಕಿ ಶಾರದಮ್ಮ ಹಾಗೂ ಶಿವಮ್ಮ ಅವರನ್ನು ಸೂರಂಕಣ, ಸುಗಮ ಸಂಗೀತ ಗಂಗಾ, ಯುರೇಕಾ ಅಕಾಡಮಿ, ಕಲ್ಕಟ್ಟೆ ಪುಸ್ತಕದ ಮನೆ ವತಿಯಿಂದ ಸನ್ಮಾನಿಸಲಾಯಿತು.
ಶಾರದಮ್ಮ, ಶಿವಮ್ಮ ಹಾಡಿದ ಸೋಬಾನೆ ಪದ, ತತ್ವಪದಗಳು ಕೇಳುಗರನ್ನು ರಂಜಿಸಿದವು. ಸಂವಾದದಲ್ಲಿ ರಮೇಶ್ ಬೊಂಗಾಳೆ, ರೇಖಾ ನಾಗರಾಜರಾವ್, ಹುಲಿಕೆರೆ ಪುಲಿಕೇಶಿ, ಧೃವ ಕುಮಾರ್, ದೀಪಕ್ ದೊಡ್ಡಯ್ಯ, ಚೌಳಹಿರಿಯೂರು ದೇವರಾಜ್, ಕಲ್ಕೆರೆ ಲತಾ, ಪ್ರಕಾಶ್ ಶಿರಸಿ, ನಸ್ರುಲ್ಲಾ ಶರೀಫ್ ಭಾಗವಹಿಸಿದ್ದರು. ನಾಗರಾಜರಾವ್ ಕಲ್ಕಟೆ ವಂದಿಸಿದರು.