ವನಿತಾ ವಿದ್ಯಾಲಯದ ಮೂವರು ಶಿಕ್ಷಕರ ಬಂಧನ
ಶಿವಮೊಗ್ಗ, ಅ. 13: ಶಿವಮೊಗ್ಗದ ವಿನೋಬಾ ನಗರದ ವನಿತಾ ವಿದ್ಯಾ ಲಯದ ಮುಖ್ಯ ಶಿಕ್ಷಕನ ನಿಗೂಢ ಸಾವಿನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಹೊನ್ನಾಳ್ಳಿ ಪೊಲೀಸರು ಅದೇ ಶಾಲೆಯ ಮೂವರು ಶಿಕ್ಷಕರನ್ನು ಕೊಲೆ ಆರೋಪದ ಮೇಲೆ ಬಂಧಿಸಿರುವ ಘಟನೆ ಗುರುವಾರ ವರದಿಯಾಗಿದೆ. ಬಸವರಾಜಪ್ಪ(52) ಸಹೋದ್ಯೋಗಿಗಳಿಂದಲೇ ಕೊಲೆಗೀಡಾದ ಮುಖ್ಯ ಶಿಕ್ಷಕ. ಸಹ ಶಿಕ್ಷಕರಾದ ಚೆನ್ನಬಸಪ್ಪ(52), ಚೆನ್ನಪ್ಪ(30) ಹಾಗೂ ನಾಗರಾಜ್(35)ಬಂಧಿತ ಆರೋಪಿಗಳು.
ದೂರು ದಾಖಲಾಗಿತ್ತು: ಇತ್ತೀಚೆಗೆ ಬಸವರಾಜಪ್ಪರವರು ನಾಪತ್ತೆಯಾಗಿದ್ದು, ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಅವರ ಪತ್ನಿ ಅ. 7ರಂದು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಪತಿಯ ಸಹೋದ್ಯೋಗಿಗಳ ವಿರುದ್ಧವೇ ಕೊಲೆ ಶಂಕೆ ವ್ಯಕ್ತಪಡಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ನ್ಯಾಮತಿ ಪೊಲೀಸರು, ಬಸವರಾಜಪ್ಪನವರ ಪತ್ನಿ ನೀಡಿದ ದೂರಿನನ್ವಯ ಆರೋಪಿಗಳ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ ಇನ್ ಸ್ಪೆೆಕ್ಟರ್ ಜೆ. ರುದ್ರೇಶ್ ನೇತೃತ್ವದ ಪೊಲೀಸ್ ತಂಡ, ಬಸವರಾಜಪ್ಪ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ವಿನೋಬಾ ನಗರದಲ್ಲಿರುವ ವನಿತಾ ವಿದ್ಯಾಲಯ ಸೇರಿದಂತೆ ಹಲವೆಡೆ ಭೇಟಿ ನೀಡಿ ತನಿಖೆ ನಡೆಸಿತ್ತು. ಅಂತಿಮವಾಗಿ ಹೊನ್ನಾಳ್ಳಿ ತಾಲೂಕಿನ ಕತ್ತಿಗೆ ಕ್ರಾಸ್ ಬಳಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗೀಡಾದ ಬಸವರಾಜಪ್ಪನವರು ಸಹೋದ್ಯೋಗಿಗಳ ಇನ್ಸೂರೆನ್ಸ್ ಹಣ ದುರ್ಬಳಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ಹಲವು ಬಾರಿ ಆರೋಪಿಗಳು ಹಾಗೂ ಬಸವರಾಜಪ್ಪರ ನಡುವೆ ಗಲಾಟೆಯಾಗಿತ್ತು ಎನ್ನಲಾಗಿದೆ. ಇದೇ ಕಾರಣದಿಂದ ಆರೋಪಿಗಳು ಬಸವರಾಜಪ್ಪರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.