ಗುಜರಾತ್: ನಕಲಿ ಎನ್‌ಕೌಂಟರ್ ಕುಖ್ಯಾತಿಯ ನಿವೃತ್ತ ಡಿವೈಎಸ್ಪಿ ಮತ್ತೆ ಸೇವೆಗೆ!

Update: 2016-10-14 03:17 GMT

ಅಹ್ಮದಾಬಾದ್, ಅ.14: ಇಷ್ರತ್ ಜಹಾನ್ ಹಾಗೂ ಸಿದ್ದಿಕ್ ಜಮಾಲ್ ಮೆಹ್ತಾರ್ ನಕಲಿ ಎನ್‌ಕೌಂಟರ್‌ನ ಆರೋಪಿ, ಪ್ರಸ್ತುತ ಜಾಮೀನು ಮೇಲೆ ಬಿಡುಗಡೆಗೊಂಡಿರುವ ಮಾಜಿ ಎನ್‌ಕೌಂಟರ್ ಸ್ಪೆಷಲಿಸ್ಟ್ ತರುಣ್ ಬರೋಟ್‌ ನಿವೃತ್ತಿಯಾಗಿ ಎರಡು ವರ್ಷದ ಬಳಿಕ ಅವರನ್ನು ಮತ್ತೆ ಸರಕಾರಿ ಸೇವೆಗೆ ಸೇರಿಸಿಕೊಳ್ಳಲಾಗಿದೆ.

ಬಾರೋಟ್ (62) ಡಿವೈಎಸ್ಪಿಯಾಗಿ ನಿವೃತ್ತರಾಗಿದ್ದರು. ಇದೀಗ ಅವರನ್ನು ವಡೋದರದಲ್ಲಿರುವ ಪಶ್ಚಿಮ ರೈಲ್ವೆ ಕೇಂದ್ರ ಕಚೇರಿಯ ಡಿವೈಎಸ್ಪಿಯಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಮತ್ತೊಬ್ಬ ಪೊಲೀಸ್ ಅಧಿಕಾರಿ ಬಿ.ಆರ್.ಚೌಬೆ ಅವರು ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್‌ನಲ್ಲಿ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ. ಅವರನ್ನೂ ಅಹ್ಮದಾಬಾದ್ ಜಿಲ್ಲೆ ವಿರಂಗಂ ಮೀಸಲು ಪೊಲೀಸ್ ಪಡೆಯ ಡಿವೈಎಸ್ಪಿಯಾಗಿ ನೇಮಿಸಲಾಗಿದೆ. 2014ರಲ್ಲಿ ಅವರನ್ನು ಮರುನೇಮಕ ಮಾಡಿಕೊಂಡ ಬಳಿಕ ಮುಂಬೈನ ಮಾಹಿತಿ ಹಾಗೂ ಪ್ರಸಾರ ವಿಭಾಗದ ಸಮನ್ವಯ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ಗುಜರಾತ್‌ನಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿ ನಡೆಸಿದ ಮರುದಿನವೇ ಈ ನೇಮಕಾತಿ ಆದೇಶ ಹೊರಬಿದ್ದಿದೆ. ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ದೋಷಮುಕ್ತರಾಗಿರುವ ರಾಜ್‌ಕುಮಾರ್ ಪಾಂಡ್ಯನ್ ಹಾಗೂ ಅಭಯ್ ಚೂಡಾಸಮ ಅವರನ್ನು ಕ್ರಮವಾಗಿ ಐಜಿ ಹಾಗೂ ಡಿಐಜಿಗಳಾಗಿ ನೇಮಕ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News