ನಡುರಸ್ತೆಯಲ್ಲೇ ಹೊತ್ತಿ ಉರಿದ ಸ್ಕಾರ್ಪಿಯೋ
ಹಾಸನ, ಅ.14: ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಘಟನೆ ನಗರದ ಸಂಪಿಗೆ ರಸ್ತೆ, ಸಂಜೀವಿನಿ ಆಸ್ಪತ್ರೆ ಬಳಿ ಇರುವ ಫಿಫ್ತ್ ಕ್ರಾಸ್ ಬಳಿ ಸಂಭವಿಸಿದೆ. ಘಟನೆಯ ವೇಳೆ ಕಾರಿನೊಳಗಿದ್ದ ಮಹಿಳೆ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೂವನಹಳ್ಳಿ ನಿವಾಸಿ ವಿಜಿಕುಮಾರ್ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಮಗಳಿಗೆ ಐಸ್ ಕ್ರಿಂ ತರಲೆಂದು ತೆರಳಿದ್ದರು. ಈ ಸಂದರ್ಭ ಏಕಾಏಕಿ ವಾಹನಕ್ಕೆ ಬೆಂಕಿ ಹತ್ತಿಕೊಂಡು ಉರಿಯಲಾರಂಬಿಸಿದೆ. ತಕ್ಷಣ ವಾಹನದ ಒಳಗಿದ್ದ ಪತ್ನಿ ಕವಿತಾ (33) ಹಾಗೂ ಮಗಳು ಹರ್ಷಿತಾ (12)ರನ್ನು ಸ್ಥಳೀಯರ ಸಹಾಯದಿಂದ ಹೊರಗೆ ತರಲಾಯಿತು. ಘಟನೆಯಿಂದ ತಾಯಿ-ಮಗಳಿಗೆ ಅಲ್ಲಲ್ಲಿ ಸುಟ್ಟಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್‌ನಿಂದ ಸ್ಕಾರ್ಪಿಯೊಗೆ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿಯಿಂದಾಗಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದೆ ವಾಹನದ ಬಳಿ ಇದ್ದ ಮಾರುತಿ ಓಮ್ನಿ ವಾಹನಕ್ಕೂ ಸಲ್ಪ ಹಾನಿಯಾಗಿದೆ. ಇಲ್ಲಿ ಇದ್ದ ವಿದ್ಯುತ್ ಕಂಬದ ಮೇಲಿನ ಸಂಪರ್ಕದ ವೈರುಗಳು ಕೂಡ ಸುಟ್ಟು ಹೋಗಿದೆ. ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.