‘ಪಂಕ್ತಿಭೇದ ಸಲ್ಲ: ಮುತ್ತಿಗೆ ತಪ್ಪು’: ಎಚ್.ಆಂಜನೇಯ
ಬೆಂಗಳೂರು, ಅ. 14: ರಾಜ್ಯದಲ್ಲಿನ ಯಾವುದೇ ಮಠ, ಮಂದಿರ, ಪೀಠ ಮತ್ತು ದೇವಸ್ಥಾನಗಳಲ್ಲಿ ಯಾವುದೇ ಕಾರಣಕ್ಕೂ ಪಂಕ್ತಿಭೇದ ಆಚರಣೆ ಮಾಡುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದಿಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಧರ್ಮ ಗುರುಗಳು ಧರ್ಮ ಪ್ರತಿಪಾದನೆ ಮಾಡಬೇಕೆ ಹೊರತು, ಅಸಮಾನತೆ, ಅಸ್ಪಶ್ಯತೆ, ಅನಿಷ್ಟ ಪದ್ಧತಿಗಳ ಆಚರಣೆಯಲ್ಲಿ ತೊಡಗುವುದು ಸಲ್ಲ ಎಂದು ಹೇಳಿದರು.
ಇತ್ತೀಚೆಗೆ ನಡೆದ ‘ಉಡುಪಿ ಚಲೋ’ ಸಮಾರಂಭದಲ್ಲಿ ಉಡುಪಿ ಮಠದಲ್ಲಿ ಪಂಕ್ತಿಭೇದ ನಿಷೇಧಿಸದಿದ್ದರೆ ಮಠಕ್ಕೆ ಮುತ್ತಿಗೆ ಹಾಕುವುದೆಂಬ ದಲಿತ ಸಂಘಟನೆಗಳು ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಆಂಜನೇಯ, ಯಾವುದೇ ಮಠಕ್ಕೆ ಮುತ್ತಿಗೆ ಹಾಕುವುದು ತಪ್ಪು ಎಂದರು.
ಧರ್ಮ ಗುರುಗಳನ್ನು ಎಲ್ಲರೂ ಗೌರವಿಸುತ್ತಾರೆ. ಅವರ ಕಾಲಿಗೆ ಎರಗುತ್ತಾರೆ. ಆದರೆ, ಅಂತಹ ಮಠಾಧಿಪತಿಗಳು ಪಂಕ್ತಿಭೇದ, ಅಸ್ಪಶ್ಯತೆ ಆಚರಣೆ ಮಾಡುವುದು ಮತ್ತು ಸಮಾಜದಲ್ಲಿ ಅಸಮಾನತೆ ಸೃಷ್ಟಿಸಲು ಮುಂದಾಗುವುದನ್ನು ಯಾರೊಬ್ಬರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಂಜನೇಯ ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಅಸಮಾನತೆ, ಅಸ್ಪಶ್ಯತೆ ಸೇರಿದಂತೆ ಅನಿಷ್ಟ ಪಿಡುಗುಗಳನ್ನು ಹೋಗಲಾಡಿಸಲು ಮಠಾಧೀಶರುಗಳು ಶ್ರಮಿಸಬೇಕು. ಮಾತ್ರವಲ್ಲ ಸಮಾನತೆ ಸಮಾಜದ ನಿರ್ಮಾಣಕ್ಕೆ ಮಠಾಧೀಶರು ಶ್ರಮಿಸಬೇಕು ಎಂದು ಆಂಜನೇಯ ಇದೇ ವೇಳೆ ತಿಳಿಸಿದರು.
ಸಿಂಗಾಪುರಕ್ಕೆ ದಲಿತ ಕಲಾವಿದರು
‘ವಿಸಾ’ ಸಮಸ್ಯೆ ಹಿನ್ನೆಲೆಯಲ್ಲಿ ಅಕ್ಕ ಸಮ್ಮೇಳನಕ್ಕೆ ತೆರಳಲು ಸಾಧ್ಯವಾಗದ 60ಮಂದಿ ದಲಿತ ಕಲಾವಿದರನ್ನು ಇದೀಗ ಸರಕಾರಿ ಖರ್ಚಿನಲ್ಲಿ ಇದೇ ತಿಂಗಳ 29 ಮತ್ತು 30ರಂದು ಸಿಂಗಾಪುರದಲ್ಲಿ ನಡೆಯಲು ‘ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ’ಕ್ಕೆ ಕಳುಹಿಸಲಾಗುವುದು ಎಂದು ಆಂಜನೇಯ ತಿಳಿಸಿದರು.
ಶೋಷಿತ ಸಮುದಾಯ ಕಲಾವಿದರಲ್ಲಿ ಅಡಗಿರುವ ಸುಪ್ತ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರಕಾರ ಮುಂದಾಗಿದೆ. ಜಾನಪದ ಹಾಡು, ನೃತ್ಯ, ತಮಟೆ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ತಂಡಗಳನ್ನು ಸಿಂಗಾಪುರಕ್ಕೆ ಕಳುಹಿಸಲಾಗುತ್ತಿದೆ ಎಂದರು.