18 ಸಾವಿರ ಶಿಕ್ಷಕರ ನೇಮಕ ಶೀಘ್ರ: ತನ್ವೀರ್ ಸೇಠ್
ಬೆಂಗಳೂರ, ಅ.14: ಪ್ರಾಥಮಿಕ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ 10 ಸಾವಿರ ಶಿಕ್ಷಕರು ಸೇರಿದಂತೆ ಮುಂದಿನ ಮೂರು ವರ್ಷಗಳಲ್ಲಿ 18 ಸಾವಿರ ವಿಷಯವಾರು ಪದವೀಧರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಾಥಮಿಕ ಶಾಲೆಯಲ್ಲಿ ಒಟ್ಟು 14589 ಶಿಕ್ಷಕರ ಕೊರತೆಯಿದೆ. ಪ್ರತಿವರ್ಷ 3400ರಿಂದ 3500 ಶಿಕ್ಷಕರು ನಿವೃತ್ತಿ ಆಗುತ್ತಿದ್ದಾರೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ 10ಸಾವಿರ, 2017-18ರಲ್ಲಿ 4ಸಾವಿರ ಹಾಗೂ 2018-19ರಲ್ಲಿ 4ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿನಿಯರ ಸುರಕ್ಷತೆ ಹಾಗೂ ಸೈಕಲ್‌ಗಳನ್ನು ಸರಾಗವಾಗಿ ತುಳಿಯಲು ಅನುಕೂಲವಾಗುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ಚೂಡಿದಾರ್ ಮತ್ತು ದಪ್ಪಟವನ್ನು ಸಮವಸ್ತ್ರವಾಗಿ ವಿತರಿಸಲಾಗುವುದು. ಈ ಸಂಬಂಧ ಮುಂದಿನ ನವೆಂಬರ್‌ವೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ, ಮುಂದಿನ ವರ್ಷ ಶಾಲೆಗಳು ಪ್ರಾರಂಭವಾಗುತ್ತಿದ್ದಂತೆ ಪ್ರತಿ ಶಾಲೆಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಶಾಲೆಗಳಲ್ಲಿ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ ಕ್ಲಸ್ಟರ್ ಮಟ್ಟದಲ್ಲಿ ಪ್ರಯೋಗಾಲಯ ತೆರೆಯಲು ತೀರ್ಮಾನಿಸಲಾಗಿದೆ ಎಂದ ಸಚಿವರು ಪ್ರಸಕ್ತ ಸಾಲಿನಲ್ಲಿ ಮಂಡ್ಯ, ರಾಮನಗರ ಹಾಗೂ ಮೈಸೂರಿನಲ್ಲಿ ಈ ಕೇಂದ್ರಗಳನ್ನು ತೆರೆಯಲು ಚಿಂತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲು ತೀರ್ಮಾನಿಸಲಾಗಿದೆ. ಇಲಾಖೆಯಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾಗಿರುವ ಹುದ್ದೆಗಳನ್ನು ಕಡಿತಗೊಳಿಸಲಾಗುವುದು. ಅಲ್ಲದೆ, ಅಗತ್ಯವಿರುವೆಡೆ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಸರಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ. ಸರಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಹಾಜರಾತಿಯತ್ತ ವಿಶೇಷ ಆದ್ಯತೆ ನೀಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಸರಕಾರದ ಪ್ರಮುಖ ಯೋಜನೆಗಳಾದ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ, ಷೂ(ಬೂಟು) ಹಾಗೂ ಬೈಸಿಕಲ್ ವಿತರಣೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಕಿರಣ ಯೋಜನೆಯ ಮೂಲಕ 93ಲಕ್ಷ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸಲಾಗಿದೆ. ಹಾಗೂ ಪ್ರತಿಶಾಲೆಯಲ್ಲಿ ಬಯೋಮೆಟ್ರಿಕ್ ಅಳವಡಿಸಿ ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಲಾಗುತ್ತಿದೆ. ಇವೆಲ್ಲವನ್ನು ಆಗಾಗ ಪರೀಕ್ಷಿಸುವ ಮೂಲಕ ವಿದ್ಯಾರ್ಥಿಗಳು ಶಾಲೆ ತೊರೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್
ಎಸೆಸೆಲ್ಸಿ ಹೆಚ್ಚು ಅಂಕ ಪಡೆದ ಪ್ರತಿ ತಾಲೂಕಿನ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುವುದು. 2015 ಹಾಗೂ 2016ರ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮುಂದಿನ ನವೆಂಬರ್‌ನಲ್ಲಿ ಲ್ಯಾಪ್‌ಟಾಪ್ ವಿತರಿಸಲಾಗುವುದು.
-ತನ್ವೀರ್ ಸೇಠ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ