ನಿರಾಶ್ರಿತರ ಮಕ್ಕಳಿಗೆ ಶಿಕ್ಷಣದ ಮೂಲಕ ಭವಿಷ್ಯದ ಹಾದಿ ತೋರಿಸಿ: ನ್ಯಾ. ಸಂದೀಪ್
ತೀರ್ಥಹಳ್ಳಿ, ಅ.14: ನಿರಾಶ್ರಿತರ ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಭವಿಷ್ಯದ ದಾರಿ ತೋರಿಸುವ ಮನುಷ್ಯತ್ವವನ್ನು ನಾಗರಿಕರಾದ ನಾವುಗಳು ಬೆಳೆಸಿಕೊಳ್ಳಬೇಕಾಗಿದೆ. ಶಿಕ್ಷಣವೆಂಬುದು ಎಲ್ಲ ಜಾತಿ, ಧರ್ಮ, ಬಡವ, ಶ್ರೀಮಂತರ ಹಕ್ಕು ಎಂದು ತೀರ್ಥಹಳ್ಳಿ ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಹೇಳಿದ್ದಾರೆ.
ಪಟ್ಟಣದ ಕುರುವಳ್ಳಿಯ ತುಂಗಾ ನದಿ ಸೇತುವೆಯ ಪಕ್ಕದ ನಿರಾಶ್ರಿತರ ಕಾಲನಿಯಲ್ಲಿ ತೀರ್ಥಹಳ್ಳಿ ತಾಲೂಕು ಕಾನೂನು ಸುರಕ್ಷತಾ ರಥಯಾತ್ರೆಯ ಕಾರ್ಯಕ್ರಮದಲ್ಲಿ ನಿರಾಶ್ರಿತರ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು ಹಾಗೂ ನಿರಾಶ್ರಿತರಿಗಾಗಿ ಸೂಕ್ತ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನಿರಾಶ್ರಿತರ ಶಿಬಿರದಲ್ಲಿ ವಾಸಿಸುವ ಜನರಿಗೆ ಕಾನೂನಿನ ಅರಿವು ಅತ್ಯಗತ್ಯ. ನೀವು ಶುದ್ಧತೆಯನ್ನು ಕಾಪಾಡಿಕೊಂಡು ಬದುಕುವುದರೊಂದಿಗೆ ದುರಾಭ್ಯಾಸಗಳಿಂದ ದೂರ ಇರಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ನೀವು ನಮ್ಮಾಂದಿಗೆ ನಮ್ಮವರಂತೆ ಬದುಕಬೇಕು ಎಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಲೋಕೇಶಪ್ಪ ಮಾತನಾಡಿ, ಈ ಭಾಗದಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಶೀಘ್ರದಲ್ಲಿಯೇ ಪಡಿತರ ಚೀಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ವತಿಯಿಂದ ನಿರಾಶ್ರಿತರ ಮಕ್ಕಳಿಗೆ ಉಚಿತ ಪಾದರಕ್ಷೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೌಷ್ಟಿಕಾಂಶ ಮಾತ್ರೆ ವಿತರಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಹೆಚ್ಚುವರಿ ನ್ಯಾಯಾಧೀಶ ಲೋಕೇಶ್ ಧನಪಾಲ್, ರೋಟರಿ ಅಧ್ಯಕ್ಷ ಬಿ.ಗಿರೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಚಂದ್ರಶೇಖರ ಶೆಟ್ಟಿ, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪರಿಸರ ಹೋರಾಟಗಾರ ನಿಶ್ಚಲ್ ಶೆಟ್ಟಿ, ಪ್ರಸನ್ನ, ಗೋಪಾಲ ಪೂಜಾರಿ, ಪೂರ್ಣೇಶ, ನಾಗರಾಜ್ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ನಿರಾಶ್ರಿತರಿಗೆ ಸರಕಾರಿ ಜೆ.ಸಿ.ಆಸ್ಪತ್ರೆಯ ಆರೋಗ್ಯ ವಿಭಾಗದ ವತಿಯಿಂದ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ನಡೆಸಲಾಯಿತು.