ಆಂಗ್ಲ ನಾಮಫಲಕ ತೆರವುಗೊಳಿಸಲು ಆಗ್ರಹ
ಚಿಕ್ಕಮಗಳೂರು, ಅ.14: ನಗರದ ವ್ಯಾಪಾರ ಕೇಂದ್ರಗಳ ಮೇಲಿರುವ ಆಂಗ್ಲ ನಾಮಫಲಕ ಮತ್ತು ಜಾಹೀರಾತುಗಳನ್ನು ತೆರವುಗೊಳಿಸುವ ಜೊತೆಗೆ ಮಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅವರ ನೇತೃತ್ವದಲ್ಲಿ ನಗರಸಭೆೆ ಅಧ್ಯಕ್ಷೆ ಎಚ್.ಆರ್ ಕವಿತಾ ಶೇಖರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಎಲ್ಲ ವ್ಯವಹಾರಗಳು ಕನ್ನಡದಲ್ಲೇ ನಡೆಯಬೇಕು ನಾಮಫಲಕಗಳನ್ನು ಕೂಡ ಕನ್ನಡ ಭಾಷೆಯಲ್ಲೇ ಹಾಕಬೇಕು ಎಂದು ರಾಜ್ಯ ಸರಕಾರದ ಆದೇಶವಿದೆ. ಆದರೂ ನಗರದ ಬಹುತೇಕ ವ್ಯಾಪಾರ ಕೇಂದ್ರಗಳ ಮೇಲೆ ಆಂಗ್ಲ ನಾಮಫಲಕ, ಜಾಹೀರಾತುಗಳು ರಾಜಿಸುತ್ತಿವೆ ಎಂದು ಆರೋಪಿಸಿದರು.
ಕಾಯ್ದೆಯ ಪ್ರಕಾರ ನಾಮಫಲಕಗಳಲ್ಲಿ ಶೇ.70 ರಷ್ಟು ಕನ್ನಡವಿರಬೇಕು. ಉಳಿದ ಶೇ. 30 ರಷ್ಟು ಜಾಗದಲ್ಲಿ ಅನ್ಯಭಾಷೆ ಇರಬೇಕು ಎಂಬ ನಿಯಮವಿದ್ದರೂ ಅದನ್ನು ಯಾವುದೇ ಕಂಪೆನಿಗಳು, ಅಂಗಡಿಗಳು ಪಾಲಿಸುತ್ತಿಲ್ಲ ಎಂದರು.ಆಂಗ್ಲ ನಾಮಫಲಕಗಳ ತೆರವಿಗೆ ಹಲವು ಬಾರಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಡಳಿತ, ನಗರಸಭೆ ಹಾಗೂ ಅಂಗಡಿ ಮಾಲಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಕಾರ್ಯಕರ್ತರು, ಈಗಲಾದರೂ ಎಚ್ಚೆತ್ತು ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ನ.2ರೊಳಗೆ ಆಂಗ್ಲ ನಾಮಫಲಕಗಳನ್ನು ತೆರವುಗೊಳಿಸುವಂತೆ ಗಡುವು ನೀಡಿದ ಕಾರ್ಯಕರ್ತರು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಮಾತನಾಡಿ, ಆಂಗ್ಲ ನಾಮಫಲಕವುಳ್ಳ ಅಂಗಡಿಗಳ ಪಟ್ಟಿಯನ್ನು ತಮಗೆ ನೀಡುವಂತೆ ತಿಳಿಸಿದ ಅವರು, ಆಂಗ್ಲ ನಾಮಪಲಕವುಳ್ಳ ವ್ಯಾಪಾರ ಕೇಂದ್ರಗಳಿಗೆ ನೋಟಿಸ್ ನೀಡುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಖಜಾಂಜಿ ಸುರೇಶ್, ತಾಲೂಕು ಅಧ್ಯಕ್ಷ ಮನೋಜ್ ಶೆಟ್ಟಿ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ನಾಗಲತಾ, ರಾಹುಲ್, ಶರತ್ ಮತ್ತಿತರರು ಉಪಸ್ಥಿತರಿದ್ದರು.