×
Ad

ರಂಗಭೂಮಿಯಿಂದ ತಳಸಮುದಾಯಕ್ಕೆ ಧ್ವನಿಯಾಗಲು ಸಾಧ್ಯ: ಕಾಗೋಡು ಅಣ್ಣಪ್ಪ

Update: 2016-10-15 22:18 IST

ಸಾಗರ, ಅ.15: ಹಿಂದೆ ರಂಗಭೂಮಿ ಚಟುವಟಿಕೆಗಳು ಮೂಲೆಗುಂಪಾಗಿತ್ತು. ಬದಲಾದ ದಿನಮಾನಗಳಲ್ಲಿ ರಂಗಾಸಕ್ತಿ ಜಾಗೃತವಾಗುತ್ತಿದ್ದು, ಪ್ರೇಕ್ಷಕರು ನಾಟಕ ನೋಡಲು ಥಿಯೇಟರ್‌ಗಳಿಗೆ ಬರುತ್ತಿರುವುದು ಶುಭಸೂಚನೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕಾಗೋಡು ಅಣ್ಣಪ್ಪಹೇಳಿದರು. ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಶುಕ್ರವಾರ ಕಲಾಸಿಂಚನ ಶಿಕ್ಷಕರ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕ ಪ್ರದರ್ಶನವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಂಗಭೂಮಿ ಚಟುವಟಿಕೆಗಳು ನಿಂತ ನೀರಾಗಬಾರದು. ಅದು ಸದಾ ಹರಿಯುತ್ತಿರಬೇಕು. ನಮ್ಮಲ್ಲಿ ಅನೇಕ ರಂಗ ಸಂಸ್ಥೆಗಳಿವೆ. ರಂಗಭೂಮಿ ಮೂಲಕ ಬದುಕಿನ ನೋವುನಲಿವುಗಳನ್ನು, ತಳಸಮುದಾಯಕ್ಕೆ ಧ್ವನಿಯಾಗಲು ಸಾಧ್ಯವಿದೆ. ಇತರೆ ಎಲ್ಲ ಮಾಧ್ಯಮಗಳಿಗಿಂತ ರಂಗಭೂಮಿ ಮಾಧ್ಯಮ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಹೇಳಿದರು. ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಜ್ಞಾನಾಭಿವೃದ್ಧಿ ಹೆಚ್ಚುತ್ತದೆ. ಆದರೆ ಸಂಘಟನೆ ಕಟ್ಟಿಕೊಂಡಾಗ ಅನೇಕ ವಿಘ್ನಗಳು ಬರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಸವಾಲುಗಳನ್ನು ಎದುರಿಸುವ ಮನೋಭೂಮಿಕೆ ಇಂತಹ ವೇದಿಕೆಗಳು ನೀಡುತ್ತದೆ ಎಂದರು. ವೇದಿಕೆ ಅಧ್ಯಕ್ಷ ಖಂಡಿಕಾ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಗಣಪತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ, ಡಯೆಟ್ ಉಪನ್ಯಾಸಕಿ ಬಿಂಬಾ ಕೆ.ಆರ್.ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News