ದೇಶದಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಳ: ಕೋಳಿವಾಡ ಆತಂಕ
ಶಿವಮೊಗ್ಗ, ಅ. 15: ದೇಶದಲ್ಲಿ ಶಿಶು ಮರಣ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ-ಅಂಶದಲ್ಲಿ ಭಾರತಕ್ಕೆ ಪ್ರಥಮ ಸ್ಥಾನ ಇರುವುದು ಎಲ್ಲರನ್ನೂ ಚಿಂತೆಗೀಡುಮಾಡಿದೆ ಎಂದು ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
ಸಿಮ್ಸ್ ಸಭಾಂಗಣದಲ್ಲಿ ದಕ್ಷಿಣ ಭಾರತ ರಾಜ್ಯಗಳ ಮಕ್ಕಳ ವೈದ್ಯರ 30ನೆಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮ್ಮೇಳನಗಳು ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳ ಕುರಿತು ಚರ್ಚೆ ನಡೆಸಬೇಕು. ಪ್ರಬಂಧಗಳ ಮಂಡನೆ ಮೂಲಕ ತಜ್ಞರು ತಮ್ಮಲ್ಲಿರುವ ವಿಚಾರಧಾರೆಗಳನ್ನು ಇತರ ಪ್ರತಿನಿಧಿಗಳಿಗೆ ತಿಳಿಯಪಡಿಸಬೇಕು.ಹೀಗಾದಾಗ ಮಾತ್ರ ಸಂಶೋಧನೆ ಎಲ್ಲೆಡೆ ಪ್ರತಿಫಲಿಸಲು ಸಾಧ್ಯಎಂದರು.
ವೈದ್ಯಕೀಯ ವಿಜ್ಞಾನ ದಿನೇ ದಿನೇ ಜಗತ್ತಿನಾದ್ಯಂತ ಬೆಳೆಯುತ್ತಿದ್ದರೂ, ವಿದೇಶಿ ತಜ್ಞರನ್ನು ಮೀರಿಸುವ ಪ್ರತಿಭೆಗಳು ನಮ್ಮಲ್ಲಿದ್ದರೂ ವೈದ್ಯಕೀಯ ವ್ಯವಸ್ಥೆ ಭಾರತದಲ್ಲಿ ಹೇಳಿಕೊಳ್ಳುವಂತಹ ಸ್ಥಿತಿಯನ್ನು ತಲುಪಿಲ್ಲ ಎಂದು ಹೇಳಿದರು.
ನಮ್ಮಲ್ಲಿರುವ ವೈದ್ಯರಿಗೆ ಆಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಅವುಗಳ ಮೂಲಕ ಜನರಿಗೆ ನೀಡಬಹುದಾದ ಚಿಕಿತ್ಸೆ ಬಗ್ಗೆ ಹೆಚ್ಚಿನ ಜ್ಞ್ಞಾನ ಅಗತ್ಯವಿದೆ. ಯಾವುದೇ ಆಸ್ಪತ್ರೆಯಲ್ಲಿ ಸೌಲಭ್ಯವಿದ್ದಾಗ ಮಾತ್ರ ಹೆಚ್ಚಿನ ರೋಗಿಗಳು ಬರುತ್ತಾರೆ. ಸೌಲಭ್ಯಗಳ ಕೊರತೆ ಆಸ್ಪತ್ರೆಗಳಿಗೆ ಎಂದೂ ಎದುರಾಗಬಾರದು ಎಂದು ಹೇಳಿದರು.
ಚರ್ಚೆ: ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ಕಾಯ್ದೆಗೆ ತಿದ್ದುಪಡಿ ಅಗತ್ಯ. ಯಾವರೀತಿ ತಿದ್ದುಪಡಿ ಅಗತ್ಯ ಎನ್ನುವುದನ್ನು ಭಾರತೀಯ ವೈದ್ಯರ ಸಂಘ ಸರಕಾರಕ್ಕೆ ಮಾಹಿತಿ ನೀಡಬೇಕು. ಈ ರೀತಿ ಮಾಹಿತಿ ನೀಡಿದಲ್ಲಿ ತಾನು ಸಂಬಂಧಿಸಿದ ಸಚಿವರೊಡನೆ ಚರ್ಚಿಸಿ ತಿದ್ದುಪಡಿ ತರಲು ಎಲ್ಲ ಪ್ರಯತ್ನ ನಡೆಸುತ್ತೇನೆ ಎಂದರು.
ಸಮಾವೇಶದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಮಕ್ಕಳ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಎಚ್.ವಿ.ಕೊಟ್ಟೂರೇಶ ರಸ್ತಾಪುರಮಠ ವಹಿಸಿದ್ದರು. ಅತಿಥಿಗಳಾಗಿ ಶಿವಮೊಗ್ಗ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಬಿ.ವಿ.ಸುಶೀಲ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀ ಹಳ್ಳಿ, ಶಿವಮೊಗ್ಗ ಐಎಂಎ ಅಧ್ಯಕ್ಷ ಡಾ. ಯು.ಶಿವಯೋಗಿ, ಶಿವಮೊಗ್ಗ ಮಕ್ಕಳ ತಜ್ಞರ ಅಧ್ಯಕ್ಷ ಡಾ. ಆರ್.ಬಿ.ಪಾಟೀಲ್, ರಾಜೀವ್‌ಗಾಂಧಿ ವೈದ್ಯಕೀಯವಿಜ್ಞಾನ ಸಂಸ್ಥೆಯ ಸಿಂಡಿಕೇಟ್ ಸದಸ್ಯ ಡಾ. ಮಲ್ಲೇಶ್ ಹುಲ್ಲಮನಿ, ಭಾರತೀಯ ವೈದ್ಯಕೀಯ ಸಂಸ್ಥೆಯ ಸದಸ್ಯ ಡಾ. ಎಚ್.ಎಲ್. ಬಿದರಿ ಉಪಸ್ಥಿತರಿದ್ದರು.