×
Ad

ಮಹಾನ್ ನಾಯಕರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಿ: ಶಾಸಕಿ ಶಾರದಾ ಪೂರ್ಯಾ ನಾಯಕ್

Update: 2016-10-15 22:21 IST

ಶಿವಮೊಗ್ಗ, ಅ.15: ರಾಮಾಯಣದಂತಹ ಮಹಾನ್ ಗ್ರಂಥವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಆಕಾಲದಲ್ಲಿ ಜಾತಿ-ಮತ ನೋಡದೆ, ವಾಲ್ಮೀಕಿ ಇದನ್ನು ರಚಿಸಿದರು. ಆದರೆ ಪ್ರಸ್ತುತ ಮಹಾನ್ ನಾಯಕರನ್ನು ಜಾತಿ ಆಧಾರದ ಮೇಲೆ ನೋಡುತ್ತಿರುಮದು ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದು ಶಾಸಕಿ ಶಾರದಾ ಪೂರ್ಯಾ ನಾಯಕ್ ತಿಳಿಸಿದರು.

ಶನಿವಾರ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಮಾಯಣದಂತಹ ಮಹಾನ್ ಗ್ರಂಥ ಇನ್ನು ಮುಂದೆ ಬರಲು ಸಾಧ್ಯವಿಲ್ಲ. ಅದರಲ್ಲಿರುವ ಅಂಶಗಳನ್ನು ಜನರು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ವ್ಯಕ್ತಿ ಪೂಜೆಯಿಂದ ಏನನ್ನೂ ಸಾಧಿಸಲಾಗದು. ಮಹಾನ್ ನಾಯಕರ ತತ್ವಾದರ್ಶಗಳನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಂ.ಎಸ್. ಮುತ್ತಯ್ಯ ಮಾತನಾಡಿ, ಅಕ್ಷರ ವಂಚಿತ ತಳ ಸಮುದಾಯಕ್ಕೆ ವಾಲ್ಮೀಕಿ ಮಾದರಿ ಹಾಗೂ ಆದರ್ಶ ವ್ಯಕ್ತಿಯಾಗಿದ್ದಾರೆ. ಶಿಕ್ಷಣ ಮತ್ತು ಅಭಿವ್ಯಕ್ತಿಯ ಅವಕಾಶವೇ ಇಲ್ಲದ ಕಾಲದಲ್ಲಿ ಜಗತ್ತೇ ಮೆಚ್ಚುವ ಕಾವ್ಯವನ್ನು ಕೊಡುವ ಮೂಲಕ ತಳಸಮುದಾಯದಲ್ಲೂ ಪ್ರತಿಭೆ ಇದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಪರಂಪರೆಯ ಶ್ರೇಷ್ಠ ವ್ಯಕ್ತಿಯಾಗಿ ವಾಲ್ಮೀಕಿ ನಿಲ್ಲುತ್ತಾರೆ. ವಾಲ್ಮೀಕಿಯನ್ನು ವಿಶಿಷ್ಟ ದೃಷ್ಟಿಕೋನದಲ್ಲಿ ನೋಡುವುದನ್ನು ಮಹಾಕವಿ ಕುವೆಂಪು ತೋರಿಸಿಕೊಟ್ಟಿದ್ದಾರೆ ಎಂದರು.

ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ಯಾವ ಅವಕಾಶಗಳೂ ಇಲ್ಲದ ಕಾಲದಲ್ಲಿ ವಾಲ್ಮೀಕಿ ರಾಮಾಯಣವನ್ನು ರಚಿಸಿದರು. ಈಗಿನ ಕಾಲದಲ್ಲಿ ಎಲ್ಲ ಅವಕಾಶಗಳೂ ಇದ್ದರೂ, ಉತ್ತಮ ಸಾಧನೆಗಳು ಹೆಚ್ಚುತ್ತಿಲ್ಲ. ಸಾಧನೆಗೆ ಯಾವ ಅಡ್ಡಿಯೂ ಇಲ್ಲ ಎನ್ನುವುದನ್ನು ನಿರೂಪಿಸಬೇಕಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಜಿಪಂ ಸಿಇಒ ರಾಕೇಶ್‌ಕುಮಾರ್, ಸೂಡಾ ಅಧ್ಯಕ್ಷ ಎನ್. ರಮೇಶ್, ಶಾಸಕರು, ತಾಪಂ ಅಧ್ಯಕ್ಷೆ ರೇಖಾ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಮೆರವಣಿಗೆ: ವಾಲ್ಮೀಕಿ ಜಯಂತಿ ಪ್ರಯುಕ್ತ ಸಯನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ಅದ್ದೂರಿ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ವಾಲ್ಮೀಕಿ ಮಹರ್ಷಿಯ ಬೃಹತ್ ಭಾವಚಿತ್ರವನ್ನು ಮೆರವಣಿಗೆಯಲ್ಲಿ ತರಲಾಯಿತು. ವಿವಿಧ ಜಾನಪದ ಕಲಾ ತಂಡಗಳು, ಸಮಾಜದ ಮುಖಂಡರು, ಜನಪ್ರತಿನಿಧಿಗಳು, ಅಧಿಕಾರಿಗಳು ಮೆರವಣಿಗೆಯಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News