ಪೌರಕಾರ್ಮಿಕರ ನಿವೇಶನದಲ್ಲಿ ಮನೆ ನಿರ್ಮಾಣಕೆ ಅವಕಾಶ ನೀಡಲು ಎಡಿಸಿಗೆ ಮನವಿ
ಚಿಕ್ಕಮಗಳೂರು, ಅ.15: ಕಲ್ಲುದೊಡ್ಡಿ ಉಪ್ಪಳ್ಳಿಯಲ್ಲಿರುವ ನಗರಸಭೆಯ ಪೌರಕಾರ್ಮಿಕರ ನಿವೇಶನದಲ್ಲಿ ಮನೆಗಳನ್ನು ಕಟ್ಟಿ ವಾಸಿಸಲು ಅವಕಾಶ ಕೋರಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಎಡಿಸಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸದಸ್ಯ ನರಸಿಂಹ ಹಾಗೂ ಮುತ್ತಯ್ಯ ನೇತೃತ್ವದಲ್ಲಿ ಎಡಿಸಿ ಎಂ.ಎಲ್.ವೈಶಾಲಿಯವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ನಗರಸಭೆಯಿಂದ ದಲಿತ ಪೌರಕಾರ್ಮಿಕರಿಗೆ ನೀಡಿರುವ ನಿವೇಶನದಲ್ಲಿ ಮನೆ ಕಟ್ಟಲು ತೀರ್ಮಾನಿಸಿದ್ದು, ಈ ಸಂಬಂಧ ಕಾರ್ಮಿಕರು ಆ ಜಾಗವನ್ನು ಸ್ವಚ್ಛ ಮಾಡಲು ತೆರಳುತ್ತಿದ್ದು ಇದಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಪೌರ ಕಾರ್ಮಿಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು.
ನಗರದ ಸ್ವಚ್ಚತೆ ಮೂಲಕ ನಗರಸಭೆಯಲ್ಲಿ ಕೆಲಸ ಮಾಡುತ್ತಾ ನಗರದ ಜನರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ.
ಇಂತಹ ಶ್ರಮಿಕ ವರ್ಗದ ದಲಿತ ಕುಟುಂಬಗಳು ಕರ್ತವ್ಯದಿಂದ ನಿವೃತ್ತಿಯಾದಾಗ ವಾಸ ಮಾಡಲು ಸೂರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದರು.
ಕಲ್ಲುದೊಡ್ಡಿಯ ಉಪ್ಪಳ್ಳಿ ಸ.ನಂ.27ರಲ್ಲಿ 2 ಎಕರೆ 35ಗುಂಟೆ ಜಾಗದಲ್ಲಿ 90 ನಿವೇಶನಗಳನ್ನು ಮಾಡಿ ದಲಿತ ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡದೆ ಇದ್ದರೂ, ಪೌರ ಕಾರ್ಮಿಕರು ನಗರಸಭೆಗೆ ಕಂದಾಯ ಪಾವತಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಖಾತೆದಾರರು ಮನೆಕಟ್ಟಿಕೊಳ್ಳಲು ತೆರಳಿದಾಗ ಮೇಲ್ವರ್ಗದ ವ್ಯೆಕ್ತಿಯೋರ್ವರು ದಬ್ಬಾಳಿಕೆ ಮಾಡಿ ಜಾಗ ನನ್ನದು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಿವೇಶನದ ದಾಖಲಾತಿಗಳನ್ನು ಪರಿಶೀಲಿಸಿದಾಗ ಕಾನೂನು ರೀತಿಯಲ್ಲಿ ಸರಿಯಾಗಿದೆ ಎಂದು ತಿಳಿದಿದ್ದು, ಅ.16ರಂದು ನಿವೇಶನ ಪಡೆದ 90ಮಂದಿ ಸಾಮೂಹಿಕವಾಗಿ ತೆರಳಿ ಜಾಗದಲ್ಲಿ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಲ್ಲದೇ, ಈ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಅಡ್ಡಿ ಪಡಿಸುವ ಹುನ್ನಾರ ನಡೆಸುತ್ತಾರೆಂಬ ಗುಮಾನಿ ಇದ್ದು ಅಹಿತಕರ ಘಟನೆಗಳು ನಡೆಯದ ಹಾಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ. ಕುಮಾರ್, ಗೋಪಿ, ಮಂಜಯ್ಯ, ಮಂಜುನಾಥ್, ಪೋಲಯ್ಯ, ಪೀಟರ್ ಉಪಸ್ಥಿತರಿದ್ದರು.