ಬ್ರಿಕ್ಸ್ ಸಮಾವೇಶದ ಹಿನ್ನೆಲೆ
ಕಾರವಾರ, ಅ.15: ಪಣಜಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬ್ರಿಕ್ಸ್ ಸಮಾವೇಶದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆಗಳನ್ನು ಏರ್ಪಡಿಸಿದ್ದು, ಗೋವಾ ವಿಮಾನಯಾನದ ಮೂಲಕ ದೆಹಲಿ ತಲುಪಬೇಕಿದ್ದ ಟಿಬೇಟ್ ಹಾಗೂ ತೈವಾನ್ ದೇಶದ ಮೂವರು ಪ್ರಜೆಗಳನ್ನು ಕಾರವಾರದ ಲಂಡನ್ ಸೇತುವೆ ಬಳಿ ಶನಿವಾರ ಪೊಲೀಸರು ತಪಾಸಣೆ ನಡೆಸಿ ವಿಚಾರಣೆಗೆ ಒಳಪಡಿಸಿದರು.
ಟಿಬೆಟ್‌ನ ನೂನಂ ಜಸ್ಸೋ, ತೈವಾನ್‌ನ ಯಂಗ್ ಸಿಂಗ್, ಜಾಂಗ್ ಶೋ ಗೌಷ್ ಎಂಬವರೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ವಿದೇಶಿಯರು.
ಬ್ರಿಕ್ಸ್ ಸಮಾವೇಶದಲ್ಲಿ ಚೀನಾ ಅಧ್ಯಕ್ಷರು ಭಾಗವಹಿಸಲಿದ್ದು, ಅವರಿಗೆ ಟಿಬೆಟಿಯನ್ನರು ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಟಿಬೆಟ್ ಹಾಗೂ ತೈವಾನ್ ಪ್ರಜೆಗಳನ್ನು ಕೆಲಕಾಲ ಕಾರವಾರದಲ್ಲಿಯೇ ಇರಿಸಿಕೊಂಡು ತಪಾಸಣೆ ನಡೆಲಾಯಿತು ಎಂದು ತಿಳಿದು ಬಂದಿದೆ.
ಟಿಬೆಟ್ ಹಾಗೂ ತೈವಾನ್ ಪ್ರಜೆಗಳಿಗೆ ಗೋವಾ ಪ್ರವೇಶವನ್ನು ನಿರ್ಬಂಧಿಸಿರುವ ಕಾರಣ ಮುಂದೆ ತೆರಳಲು ಅವಕಾಶ ನೀಡಲಿಲ್ಲ. ಹೀಗಾಗಿ ಟಿಬೆಟ್‌ನ ನೂನಂ ಜಸ್ಸೋ, ತೈವಾನ್‌ನ ಯಂಗ್ ಸಿಂಗ್, ಜಾಂಗ್ ಶೋ ಗೌಷ್ ಗೋವಾಕ್ಕೆ ತೆರಳಲು ಸಾಧ್ಯವಾಗಿಲ್ಲ. ಬಳಿಕ ಅವರ ದಾಖಲೆಗಳನ್ನು ಪರಿಶೀಲಿಸಿ ಬೆಂಗಳೂರು ಮಾರ್ಗವಾಗಿ ಕಳುಹಿಸಲಾಗಿದೆ ಎಂದು ಸಿಪಿಐ ಶರಣಗೌಡ ಪಾಟೀಲ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.