×
Ad

ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆ ಅರಿಯಿರಿ: ಸುನೀಲ್ ಸುಬ್ರಮಣಿ

Update: 2016-10-15 22:32 IST

ಮಡಿಕೇರಿ,ಅ.15: ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಕರೆ ನೀಡಿದರು.

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಕೊಡಗೆ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಯ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

ಜಿಪಂ ಅಧ್ಯಕ್ಷ ಬಿ.ಎ.ಹರೀಶ್‌ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಡಿನಲ್ಲಿ ಬದುಕು ಸವೆಸುತ್ತಿದ್ದ ವಾಲ್ಮೀಕಿ, ವಿಶ್ವ ಶ್ರೇಷ್ಠ ಮಾನವನಾಗಿ ಬೆಳೆದರು. ಸಾವಿರಾರು ವರ್ಷಗಳ ಹಿಂದೆಯೇ ರಾಮಾಯಣವನ್ನು ಬರೆದು ಧಾರ್ಮಿಕತೆಯ ಬದುಕನ್ನು ಎತ್ತಿ ಹಿಡಿದರು ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಮಾತನಾಡಿ, ನಾಗರಿಕತೆಯ ಬದಲಾವಣೆಗೆ ವಾಲ್ಮೀಕಿಯವರ ಬದುಕು ಒಂದು ಉತ್ತಮ ನಿದರ್ಶನವಾಗಿದೆ ಎಂದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವಯ್ಯ ಆತ್ನಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಜಿಪಂ ಸದಸ್ಯ ಪುಟ್ಟರಾಜು, ಉಪವಿಭಾಗಾಧಿಕಾರಿ ನಂಜುಂಡೇ ಗೌಡ, ಪೌರಯುಕ್ತರಾದ ಬಿ.ಬಿ ಪುಷ್ಪಾವತಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಸತೀಶ್, ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News