ವಾಲ್ಮೀಕಿ ತಳ ಸಮುದಾಯಗಳಿಗೆ ಆದರ್ಶ ನಾಯಕ: ಡಾ. ಕೆ.ಪ್ರಭಾಕರ ರಾವ್
ಸಾಗರ,ಅ.15: ಮಹಾನ್ ಮಹರ್ಷಿ ವಾಲ್ಮೀಕಿ ಅವರು ತಳ ಸಮುದಾಯಗಳಿಗೆ ಶ್ರೇಷ್ಠ ಆದರ್ಶಕನಾಗಿದ್ದಾನೆ ಎಂದು ಶ್ರಿಮತಿ ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೆ.ಪ್ರಭಾಕರ ರಾವ್ ಹೇಳಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು. ತಳ ಸಮುದಾಯದಿಂದ ಬಂದ ವಾಲ್ಮೀಕಿ ಅವರ ಜೀವನವೇ ಒಂದು ಮಹಾಕಾವ್ಯವಾಗಿದೆ. ವಾಲ್ಮೀಕಿಯವರು ರಚಿಸಿದ ಮೂಲ ರಾಮಾಯಣದ ನಂತರ 300ಕ್ಕೂ ಹೆಚ್ಚು ರಾಮಾಯಣ ಕೃತಿಗಳು ಲೋಕಾರ್ಪಣೆಗೊಂಡಿವೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಾಧನೆ ಹಾಗೂ ಪ್ರತಿಭೆಗಳ ಮೂಲಕ ರೂಪಾಂತರಗೊಂಡು, ಸಮಾಜಮುಖಿ ಬದುಕು ನಡೆಸಲು ಸಾಧ್ಯವಿದೆ ಎನ್ನುವುದನ್ನು ನಾವು ವಾಲ್ಮೀಕಿ ಅವರ ಬದುಕಿನಿಂದ ಕಲಿತುಕೊಳ್ಳಬಹುದು ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಎನ್.ಉಷಾ, ವಿಶ್ವಕವಿ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮೂಲಕ ನಾಡಿಗೆ ನೀಡಿರುವ ಕೊಡುಗೆ ಅವಿಸ್ಮರಣೀಯವಾದದ್ದು. ಸರಕಾರ ಸದುದ್ದೇಶದಿಂದ ಇಂತಹದಿನಾಚರಣೆಗಳನ್ನು ಆಚರಿಸಲು ಆದೇಶಿಸಿದೆ.ಆದರೆ ಕೆಲವರು ಮಾತ್ರ ಇಂತಹ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಹಾತ್ಮಾರ ದಿನಾಚರಣೆ ದಿನಗಳಂದು ಸರಕಾರಿ ರಜೆ ಘೋಷಣೆ ಮಾಡದೇ, ಅಧಿಕಾರಿಗಳು ಹಾಗೂ ನೌಕರರು ದಿನಾಚರಣೆಯಲ್ಲಿ ಪಾಲ್ಗೊಂಡು, ಕೆಲಸ ನಿರ್ವಹಿಸುವಂತೆ ಸರಕಾರ ಆದೇಶ ಹೊರಡಿಸುವ ಅಗತ್ಯವಿದೆ ಎಂದರು. ಜಿಪಂ ಸದಸ್ಯೆ ಅನಿತಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಅಲಿ ಖಾನ್, ಸದಸ್ಯ ವೀಣಾ ಪರಮೇಶ್ವರ್, ಪರಿಮಳ, ಸರಸ್ವತಿ ನಾಗರಾಜ್, ಜಿ.ಕೆ.ಭೈರಪ್ಪ, ಮೋಹನ್, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಎಚ್. ದೊಡ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಲಿಂಗಪ್ಪ ಇನ್ನಿತರರು ಹಾಜರಿದ್ದರು. ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್ ಸ್ವಾಗತಿಸಿದರು. ಕಾರ್ಯ ನಿರ್ವಾಹಣಾಧಿಕಾರಿಸಿದ್ದಲಿಂಗಯ್ಯ ವಂದಿಸಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.