ಅರ್ಜುನ ಪ್ರಶಸ್ತಿ ಪುರಸ್ಕೃತನನ್ನು ದೋಚಿದ ಆಟೊ ಚಾಲಕ

Update: 2016-10-16 04:03 GMT

ಹೊಸದಿಲ್ಲಿ, ಅ.16: ಅರ್ಜುನ ಪ್ರಶಸ್ತಿ ಪುರಸ್ಕೃತ ಶೂಟರ್ ಅಶೋಕ್ ಪಂಡಿತ್ ಅವರನ್ನು ಆಟೊ ಚಾಲಕ ಹಾಗೂ ಇತರ ಮೂವರು ಸುಲಿಗೆ ಮಾಡಿ 2.4 ಲಕ್ಷ ರೂಪಾಯಿ ಅಪಹರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಆಟೊರಿಕ್ಷಾ ಹಿಡಿದಿದ್ದ ಪಂಡಿತ್‌ರ ಹಣವನ್ನು ಅಂಬೇಡ್ಕರ್ ಸ್ಟೇಡಿಯಂ ಬಳಿ ದೋಚಲಾಯಿತು. ನಗದು ದೋಚಿ ಆಟೊರಿಕ್ಷಾದಿಂದ ನಾಲ್ವರೂ ಹಾರಿದ ಹಿನ್ನೆಲೆಯಲ್ಲಿ, ಆಟೊ ಅಪಘಾತಕ್ಕೀಡಾಗುವುದು ಖಚಿತವಾಗಿತ್ತು. ಆದರೆ ಪಂಡಿತ್ ಸಮಯಪ್ರಜ್ಞೆ ಮೆರೆದು, ಹಿಂದಿನ ಸೀಟಿನಿಂದಲೇ ಆಟೊ ರಿಕ್ಷಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ವಾಹನದಟ್ಟಣೆಯ ಪ್ರದೇಶದಲ್ಲಿ ಅಪಘಾತಕ್ಕೀಡಾಗುವುದು ತಪ್ಪಿಸಿದರು. ಅದಾಗ್ಯೂ ಆಟೊ ನಿಲ್ಲುವ ಮೊದಲು ನೀರು ಒಯ್ಯುತ್ತಿದ್ದ ಟ್ರಾಲಿಗೆ ಢಿಕ್ಕಿ ಹೊಡೆಯಿತು. ಆದರೆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಗುರುವಾರ ಬೆಳಗ್ಗೆ 8:30ರ ಸುಮಾರಿಗೆ ರೈಲು ನಿಲ್ದಾಣದ ಅಜ್ಮೀರ್ ಗೇಟ್ ಬಳಿ ಪಂಡಿತ್, ಟ್ಯಾಕ್ಸಿಗಾಗಿ ಕಾಯುತ್ತಿದ್ದರು. ಆಟೊಚಾಲಕ ಬಳಿಗೆ ಬಂದು, ನೋಯ್ಡಿಗೆ ಹೋಗಬೇಕೇ ಎಂದು ಕೇಳಿದ. ತಾನು ಕೂಡಾ ಅಲ್ಲಿಗೇ ಹೋಗುತ್ತಿದ್ದು, ಬಾಡಿಗೆ ಹಂಚಿಕೊಂಡು ನಾಲ್ವರ ಜತೆಗೆ ಪ್ರಯಾಣಿಸಬಹುದು ಎಂದು ಹೇಳಿದ. ಇದಕ್ಕೆ ಒಪ್ಪಿ ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ ಸುಲಿಗೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News