ಸಿಲಿಗುರಿಯಲ್ಲಿ 200 ಕೋ.ರೂ. ಮೌಲ್ಯದ ಹಾವಿನ ವಿಷ ವಶ

Update: 2016-10-16 09:32 GMT

ಜಲಪೈಗುರಿ,ಅ.16: ಅಂತರರಾಷ್ಟ್ರೀಯ ಕಾಳ ಮಾರುಕಟ್ಟೆಯಲ್ಲಿ 200 ಕೋ.ರೂ.ಗೂ ಅಧಿಕ ಮೌಲ್ಯವಿರುವ 15 ಪೌಂಡ್‌ಗಳಷ್ಟು ನಾಗರಹಾವಿನ ವಿಷವನ್ನು ಇಲ್ಲಿ ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು,ಅದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ಈ ವಿಷವನ್ನು ಫ್ರಾನ್ಸ್‌ನಿಂದ ಪಡೆದುಕೊಂಡಿದ್ದು, ಬಾಂಗ್ಲಾದೇಶ,ಬಳೂರಘಾಟ್ ಮತು ಸಿಲಿಗುರಿ ಮೂಲಕ ಭೂತಾನಕ್ಕೆ ಸಾಗಿಸುತ್ತಿದ್ದರೆನ್ನಲಾಗಿದೆ.

ಆರೋಪಿಗಳು ಸಿಲಿಗುರಿಯ ಹೋಟೆಲ್ಲೊಂದರಲ್ಲಿ ತಂಗಿದ್ದರು. ಗಿರಾಕಿಗಳ ಸೋಗಿನಲ್ಲಿ ಅವರಿಗಾಗಿ ಬಲೆ ಬೀಸಿದ್ದ ಅಧಿಕಾರಿಗಳು ಎರಡು ದಿನಗಳ ಪ್ರಯತ್ನದ ಬಳಿಕ ನಿನ್ನೆ ಬೆಳಗಿನ ಜಾವ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಂದ ಒಂದು ಪಿಸ್ತೂಲು,ನಾಲ್ಕು ಸುತ್ತು ಸಜೀವ ಗುಂಡುಗಳು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ವಿಷವನ್ನು ಬೆಲ್ಜಿಯಂ ಗಾಜಿನಿಂದ ತಯಾರಿಸಲಾದ ಐದು ಗುಂಡು ನಿರೋಧಕ ಜಾರ್‌ಗಳಲ್ಲಿ ತುಂಬಿಡಲಾಗಿತ್ತು.

ಬಂಧಿತರ ಪೈಕಿ ಮೂವರು ದಕ್ಷಿಣ ದಿನಾಜ್‌ಪುರದವರಾಗಿದ್ದರೆ,ಓರ್ವ ಮಾಲ್ಡಾದ ಚಂಚಲ್ ನಿವಾಸಿಯಾಗಿದ್ದಾನೆ.

 ಚೀನಾದಲ್ಲಿ ನಾಗರಹಾವಿನ ವಿಷದಿಂದ ಹಲವಾರು ಔಷಧಿಗಳನ್ನು ತಯಾರಿಸಲಾಗುತ್ತಿದ್ದು,ಅಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಹೀಗಾಗಿ ಈ ವಿಷವನ್ನು ಚೀನಾಕ್ಕೆ ರವಾನಿಸಲು ಉದ್ದೇಶಿಸಲಾಗಿತ್ತು ಎಂಬ ಶಂಕೆಯಿದೆ. ಅಲ್ಲದೇ ರೇವ್ ಪಾರ್ಟಿಗಳಲ್ಲಿ ಬಳಸಲಾಗುವ ಮಾದಕದ್ರವ್ಯಗಳ ತಯಾರಿಕೆಯಲ್ಲಿಯೂ ನಾಗರ ಹಾವಿನ ವಿಷವನ್ನು ಬಳಸಲಾಗುತ್ತದೆ ಎಂದು ಅರಣ್ಯಾಧಿಕಾರಿ ಸಂಜಯ್ ದತ್ತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News