ಮಳೆಗಾಗಿ ಪೂಜೆ ಸಲ್ಲಿಸಿದ ಕೃಷಿ ಕುಟುಂಬಗಳು
ಸೊರಬ,ಅ.16: ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದರೂ ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ರವಿವಾರ ಸಂಭ್ರಮದಿಂದ ಆಚರಿಸಿದರು. ಕಳೆದ ಎರಡು ವರ್ಷಗಳಿಂದ ವರುಣ ಮುನಿಸಿಕೊಂಡಿದ್ದಾನೆ. ರೈತ ಸಮೂಹ ಸಂಕಷ್ಟದಲ್ಲಿದೆ. ಆದರೂ ಸಹ ನಾವು ನಂಬಿದ ಭೂಮಿ ನಮ್ಮನ್ನು ಕಾಯುತ್ತದೆ ಎಂಬ ಅಚಲ ನಂಬಿಕೆ ರೈತ ಸಮುದಾಯದ್ದಾಗಿದೆ. ಒಂದಡೆ ಆಗಸವನ್ನು ನೋಡುತ್ತಾ ಮಳೆಗಾಗಿ ಕಾಯುತ್ತಾ, ಮತ್ತೊಂಡೆ ಭಕ್ತಿಯಿಂದ ಭೂಮಿ ಹುಣ್ಣಿಮೆಯಲ್ಲಿ ತೊಡಗಿದ್ದು ಕಂಡು ಬಂದಿತು. ಮಳೆ ಮುಗಿದು ತೆನೆಯೊಡೆಯುವ ಬೆಳೆಗೆ ಕೃಷಿ ಕುಟುಂಬಗಳು ಪೂಜೆ ಸಲ್ಲಿಸಿ ಎಡೆ ಅರ್ಪಿಸುವ ಸಂಪ್ರದಾಯ ಮಲೆನಾಡ ಭಾಗದಲ್ಲಿದೆ. ನಾಗರಿಕತೆ ಬೆಳೆದಂತೆ ನಮ್ಮ ಆಚಾರ-ವಿಚಾರಗಳನ್ನು ಒಂದೊಂದಾಗಿ ಮರೆಯುತ್ತೇವೆ ಎಂದು ಹೇಳುವವರಿಗೆ ಭೂಮಿ ಹುಣ್ಣಿಮೆಯ ಭೂಮಿ ಪೂಜೆ ಉತ್ತರ ನೀಡುತ್ತದೆ. ವಿಶೇಷ ತಿಂಡಿ-ತಿನಿಸುಗಳು :
ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೃಷಿಕರು ವಿವಿಧ ರೀತಿಯ ಅಡುಗೆ ತಯಾರಿಸಿ ಭೂಮಿಗೆ ಅರ್ಪಿಸಿದರು. ಕೃಷಿಕರೇ ಬೆಳೆಯುವ ಬಾಳೆಕಾಯಿ, ಬಸಳೆ, ಹರವೆ ಸೊಪ್ಪು, ಪ್ರತಿಯೊಂದು ತರಕಾರಿಯನ್ನು ಒಟ್ಟು ಮಾಡಿ ಪಲ್ಯೆ ತಯಾರಿಸುವುದು, ಅಮಟೆಕಾಯಿ, ಸಿಹಿ ಕುಂಬಳ, ಹಾಲು ಕುಂಬಳ, ಸೌತೆಕಾಯಿ, ಸೋರೆಕಾಯಿ, ರೊಟ್ಟಿ, ಮೊಸರು ಬುತ್ತಿ, ಸಿಹಿ ಕಡುಬು, ಅಕ್ಕಿ ಕಡುಬು, ಕಜ್ಜಾಯ, ಕಲಸನ್ನ ಮೊದಲಾದವುಗಳಿಂದ ವಿಧ ವಿಧವಾದ ಅಡುಗೆ ತಯಾರಿಸುವ ಅವಿಭಕ್ತ ಕುಟುಂಬದ ಹೆಣ್ಣು ಮಕ್ಕಳು ಭೂಮಣ್ಣಿ ಬುಟ್ಟಿಯಲ್ಲಿ ತುಂಬಿ ತಲೆಯ ಮೇಲಿಟ್ಟು ಕೃಷಿ ಭೂಮಿಯತ್ತ ತೆರಳುವುದು ಸಂಪ್ರದಾಯ. ಅಲ್ಲಿ ಭತ್ತದ ಎರಡು ಸಸಿಗಳನ್ನು ಒಂದಾಗಿ ಸೇರಿಸಿ ಹಸಿರು ಸೀರೆ ಇರಿಸಿ, ಆಭರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು. ಮಳೆರಾಯನು ಜನ-ಜಾನುವಾರುಗಳ ಮೇಲೆ ಕರುಣೆ ತೋರಿ ಉತ್ತಮ ಮಳೆಯಾಗಬೇಕು. ಈಗಾಗಲೇ ಸಂಕಷ್ಟದಲ್ಲಿರುವ ರೈತರ ಮುಖದ ಮೇಲೆ ಮಂದಹಾಸ ಕಾಣುವಂತಾಗಲಿ ಎಂದು ಕೃಷಿಕರು ಭೂಮಿ ತಾಯಿಯಲ್ಲಿ ಬೇಡಿಕೊಂಡರು.