×
Ad

ಶಿವಮೊಗ್ಗದಲ್ಲಿ ಹೆಚ್ಚಾಗುತ್ತಿರುವ ಕ್ರಿಮಿನಲ್ ಪುಂಡಾಟ

Update: 2016-10-16 22:33 IST

ಶಿವಮೊಗ್ಗ, ಅ. 14: ಪೊಲೀಸರಿಗೆ ಹೆದರಿ ಮೂಲೆ ಸೇರಿಕೊಂಡಿದ್ದ ಶಿವಮೊಗ್ಗ ನಗರದ ಕ್ರಿಮಿನಲ್‌ಗಳು, ಇದೀಗ ಮತ್ತೆ ಬಾಲ ಬಿಚ್ಚಲಾರಂಭಿಸಿದ್ದು, ಕುಕೃತ್ಯಗಳಲ್ಲಿ ಭಾಗಿಯಾಗಲಾರಂಭಿಸಿದ್ದಾರೆ ಎಂದು ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಾಜಾ ನಿದರ್ಶನವೆಂಬಂತೆ ಗುರುವಾರ ಸಂಜೆ ಯುವಕರ ಗುಂಪೊಂದು ನಗರದ ವಿವಿಧೆಡೆ ದಾಂಧಲೆ ನಡೆಸಿದೆ. ಯುವಕನೋರ್ವನಿಗೆ ಚೂರಿಯಿಂದ ಇರಿದಿದೆ. ರಿವಾಲ್ವಾರ್, ಮಚ್ಚು, ಲಾಂಗ್‌ಗಳನ್ನು ಝಳಪಿಸಿ ನಾಗರಿಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡಿದೆ. ಯುವಕರ ಗುಂಪು ಮೊದಲು ಸಾಗರ ರಸ್ತೆಯ ಪ್ರವಾಸಿ ಮಂದಿರದ ಬಳಿ ಮಿಳಘಟ್ಟದ ಇಮ್ರಾನ್ ಎಂಬವರ ಬೈಕ್ ಅಡ್ಡಗಟ್ಟಿ, ಬೈಕ್‌ಗೆ ಬೆಂಕಿ ಹಚ್ಚಿದೆ. ತದನಂತರ ಆರ್.ಎಂ.ಎಲ್. ನಗರದಲ್ಲಿ ನಡೆದುಕೊಂಡು ಬರುತ್ತಿದ್ದ ಶಾಹೀದ್ ಬಾಷಾ ಎಂಬವರಿಗೆ ಚಾಕುವಿನಿಂದ ಇರಿದಿದೆ. ಕ್ಲಾರ್ಕ್ ಪೇಟೆಯಲ್ಲಿ ಸಾರ್ವಜನಿಕರಿಗೆ ರಿವಾಲ್ವಾರ್, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಭಯದ ವಾತಾವರಣ ಸೃಷ್ಟಿಸಿದೆ. ಗಾಯಾಳು ಶಾಹೀದ್ ಬಾಷಾರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೇಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿ ಹಿಂದಿರುಗಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಕೃತ್ಯ:

ಇತ್ತೀಚೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಕ್ರಿಮಿನಲ್‌ಗಳು ಅಟ್ಟಹಾಸ ಮೆರೆಯಲಾರಂಭಿಸಿದ್ದಾರೆ. ಕಳೆದೊಂದು ತಿಂಗಳ ಹಿಂದೆ ಆರ್‌ಎಂಎಲ್ ನಗರದ ಬಳಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದಾದ ನಂತರ ಜೆ.ಪಿ.ನಗರ ಬಡಾವಣೆಯಲ್ಲಿಯೂ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರು, ಲಾರಿಗೆ ಬೆಂಕಿ ಹಚ್ಚಲು ವಿಫಲ ಯತ್ನ ನಡೆಸಿದ್ದರು. ಇದರಲ್ಲಿ ಕಾರೊಂದು ಬೆಂಕಿಗಾಹುತಿಯಾಗಿತ್ತು. ರಾಜೇಂದ್ರ ನಗರ ಬಡಾವಣೆಯ ಮನೆಯೊಂದರಲ್ಲಿಯೂ ಡಕಾಯಿತಿಗೆ ವಿಫಲ ಯತ್ನ ನಡೆಸಲಾಗಿತ್ತು. ಪೊಲೀಸರ ಸಮ್ಮುಖದಲ್ಲಿಯೇ ಡಕಾಯಿತರು ಪರಾರಿಯಾಗಿದ್ದರು. ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಬೈಕ್‌ನಲ್ಲಿ ಆಗಮಿಸಿದ ಸರಗಳ್ಳರು ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗಿದ್ದರು. ಇತ್ತೀಚೆಗೆ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ಮನೆಯೊಂದಕ್ಕೆ ನುಗ್ಗಿ ಯುವಕನೋರ್ವನನ್ನು ಥಳಿಸಿ ಹತ್ಯೆ ಮಾಡಿತ್ತು. ಜೊತೆಗೆ ಮನೆಯವರ ಮೇಲೆಯೂ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಇದರ ಜೊತೆಗೆ ಮನೆಗಳವು, ವಾಹನಕಳವು ಸೇರಿದಂತೆ ಇತರ ಅಪರಾಧ ಚಟುವಟಿಕೆಗಳು ಹೆಚ್ಚಾಗಲಾರಂಭಿಸಿವೆ. ಓ.ಸಿ., ಜೂಜು ಅಡ್ಡೆಗಳು ಮತ್ತೆ ಸಕ್ರಿಯವಾಗಲಾರಂಭಿಸಿವೆ. ತಲೆಮರೆಸಿಕೊಂಡ ಆರೋಪಿಗಳು ಬಂಧನಕ್ಕೆ ಪೊಲೀಸರಿಂದ ಶೋಧ... ಆರ್.ಎಂ.ಎಲ್. ನಗರದಲ್ಲಿ ಶಾಹೀದ್ ಬಾಷಾರವರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಐವರು ಆರೋಪಿಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕಾಗಿ ದೊಡ್ಡಪೇಟೆ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಈ ಕೃತ್ಯಕ್ಕೆ ವೈಯಕ್ತಿಕ ದ್ವೇಷ ಕಾರಣವಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ಮಾಹಿತಿ ನೀಡಿವೆ. ಬಂಧನದ ನಂತರವಷ್ಟೇಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಎಸ್ಪಿ ಎಚ್ಚೆತ್ತುಕೊಳ್ಳಲಿ

ರವಿ ಡಿ. ಚೆನ್ನಣ್ಣನವರ್‌ರವರು ಎಸ್ಪಿಯಾಗಿದ್ದ ಅವಧಿಯಲ್ಲಿ ಕ್ರಿಮಿನಲ್‌ಗಳು ಪೊಲೀಸ್ ಠಾಣೆಗೆ ಕಾಲಿಟ್ಟರೆ ಒದೆ ಬೀಳುವುದು ಖಾತ್ರಿ ಎಂಬ ಮಾತಿತ್ತು! ಪೊಲೀಸರ ಲಾಠಿ ಏಟಿನ ಭಯದಿಂದಲೇ ಕ್ರಿಮಿನಲ್‌ಗಳು ಪೊಲೀಸರೆಂದರೇ ಭಯ ಬೀಳುತ್ತಿದ್ದರು. ಆದರೆ ಪ್ರಸ್ತುತ ಸನ್ನಿವೇಶ ಗಮನಿಸಿದರೆ ಪೊಲೀಸರ ಬಗ್ಗೆ ಕ್ರಿಮಿನಲ್‌ಗಳಲ್ಲಿದ್ದ ಭಯದ ವಾತಾವರಣ ಕಡಿಮೆಯಾಗಿದೆಯೇ ಎಂಬ ಅನುಮಾನ ಕಾಡುವಂತಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೇಯವರು ಎಚ್ಚೆತ್ತುಕೊಳ್ಳಬೇಕಾಗಿದೆ. ಯಾವುದೇ ಒತ್ತಡ, ಮುಲಾಜಿಗೆ ಒಳಗಾಗದೆ ಕಾರ್ಯನಿರ್ವಹಣೆ ಮಾಡಬೇಕಾಗಿದೆ. ಕ್ರಿಮಿನಲ್‌ಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕಾಗಿದೆ. ನಾಗರಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಾಗಿದೆ. ಪೊಲೀಸ್ ಠಾಣೆಗಳಲ್ಲಿ ನಡೆಯುವ ರಾಜೀ ಪಂಚಾಯತ್‌ಗಳಿಗೆ ಬ್ರೇಕ್ ಹಾಕಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರ ಮನವಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News