ಅಭಿವೃದ್ಧಿಗೆ ಮಹಿಳೆಯ ಸಹಭಾಗಿತ್ವ ಪರಿಣಾಮಕಾರಿ: ಸಂದೀಪ್ ವಿಜಯನ್
ಸುಂಟಿಕೊಪ್ಪ,ಅ.16: ಓರ್ವ ವ್ಯಕ್ತಿ ಬದಲಾದರೆ ದೇಶ ಬದಲಾಗುತ್ತದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದುದ್ದು ಎಂದು ಜೇಸಿ ವಲಯ 14ರ ಅಧ್ಯಕ್ಷ ಸಂದೀಪ್ ವಿಜಯನ್ ಹೇಳಿದರು.
ಇಲ್ಲಿನ ಸಂತ ಮೇರಿ ಸಭಾಂಗಣದಲ್ಲಿ ಜೇಸಿಯಟ್ಸ್ ಮತ್ತು ಮಹಿಳಾ ಜೇಸಿಯ ಅಸ್ತಿತ್ವ ಶಕ್ತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಕ್ಷೇತ್ರದಲ್ಲಿ ಛಾಪು ಮೂಡಿಸುವ ಮೂಲಕ ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ತನ್ನದೇಯಾದ ಕೊಡುಗೆ ನೀಡುತ್ತಿದ್ದಾರೆ.
ಜೇಸಿ ಸಂಸ್ಥೆ ಅನೇಕ ಸಾಮಾಜಿಕ ಸೇವೆಯನ್ನು ಮಾಡುವ ಮೂಲಕ ಮಹಿಳೆಯರ ಸಹಭಾಗಿತ್ವ ಪರಿಣಾಮಕಾರಿಯಾಗಿದೆ ಎಂದು ಸಾಬೀತುಪಡಿಸಿದೆ ಎಂದರು.
ವಿಎಸ್‌ಎಸ್‌ಎನ್ ಬ್ಯಾಂಕ್ ನಿರ್ದೇಶಕಿ ಲೀಲಾ ಮೇದಪ್ಪ ಮಾತನಾಡಿ, ಜೇಸಿಯ ಧ್ಯೇಯ ನಿಸ್ವಾರ್ಥ ಸೇವೆಯೇ ಆಗಿದೆ. ನಿರ್ಗತಿಕರನ್ನು ದುರ್ಬಲರನ್ನು ಮುಖ್ಯವಾಹಿನಿಗೆ ತರಲು ಎಲ್ಲರೂ ಕೈ ಜೋಡಿಸಿದರೆ ಸಮಾಜ ಅಭಿವೃದ್ಧಿಯತ್ತ ಸಾಗಲಿದೆ ಎಂದರು.
ಅತಿಥಿಯಾಗಿ ಆಗಮಿಸಿದ ವಿಜಯಲಕ್ಷ್ಮೀ ಶ್ರೀನಿವಾಸನ್ ಮಾತನಾಡಿ, ಸೇವಾ ಮನೋಭಾವನೆಯಿಂದ ಜೇಸಿ ಸಮಾಜ ಸೇವೆ ಮಾಡುತ್ತಿದೆ ಎಂದು ನುಡಿದರು. ಇನ್ನೋರ್ವ ಅತಿಥಿ ಲಕ್ಷ್ಮೀ ಹರೀಶ್ ಮಾತನಾಡಿ, ಮಹಿಳೆಯರಿಗೆ ದೃಢ ವಿಶ್ವಾಸ, ಆತ್ಮ ಸ್ಥೈರ್ಯ ಇರಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ಜೇಸಿ ಎಚ್‌ಜಿಎಫ್ ಪ್ರೇಮಲತಾ ಎಸ್. ರೈ ವಹಿಸಿದ್ದರು.
ಜೇಸಿಯ ಸ್ಥಾಪಕ ಅಧ್ಯಕ್ಷ ಹಾಗೂ ಹಾಸನ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಎ.ಲೋಕೇಶ್ ಕುಮಾರ್ ಅವರು ಮಾತನಾಡಿ, ಸುಂಟಿಕೊಪ್ಪ ಜೇಸಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ, ಶೈಕ್ಷಣಿಕ ತರಬೇತಿ ನೀಡುತ್ತಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಇಲ್ಲಿ ಆಯೋಜಿಸಿದ ಶಕ್ತಿ ತರಬೇತಿ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಮಾರಂಭದಲ್ಲಿ ಸುಂಟಿಕೊಪ್ಪ ಜೇಸಿಐ ಸಂಸ್ಥೆಯ ಕಾರ್ಯದರ್ಶಿ ರಮ್ಯಾ ಮೋಹನ್, ಮಾಜಿ ಅಧ್ಯಕ್ಷ ಡಾ.ಶಶಿಕಾಂತ ರೈ, ಬಿ.ಎಸ್. ಸದಾಶಿವ ರೈ, ಅನಿಕುಮಾರ್, ಭಾಗ್ಯ ಲಕ್ಷ್ಮೀ, ಮನು ಅಚ್ಚಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸುಂಟಿಕೊಪ್ಪ ಜೇಸಿ ಅಧ್ಯಕ್ಷ ವೆಂಕಪ್ಪ ಕೋಟ್ಯಾನ್ ಸ್ವಾಗತಿದರು. ಚರಣ್ ರೈ ಕಾರ್ಯಕ್ರಮ ನಿರೂಪಿಸಿದರು.