ಕಾರವಾರ: ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ
ಕಾರವಾರ, ಅ.16: ನಗರದ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಶ್ರೀ ದುರ್ಗಾದೇವಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೆರವಡಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.
ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ಓದು ಮಾತ್ರ ಮುಖ್ಯವಲ್ಲ. ವಿವಿಧ ಶಿಬಿರಗಳಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಬೆಳವಣಿಗೆ ಹೆಚ್ಚಿಸಿಕೊಳ್ಳಬೇಕು. ಮೊಬೈಲ್, ಟಿ.ವಿ ವೀಕ್ಷಣೆ ಕಡಿಮೆ ಮಾಡಿ ಪಾಲಕರ ಮಾರ್ಗದರ್ಶನದಂತೆ ಉತ್ತಮ ಶಿಕ್ಷಣ ಪಡೆದು ಅವರ ಆಸೆ ಪೂರೈಸಬೇಕು ಎಂದರು. ಮುಖ್ಯ ಅತಿಥಿಗಳಾದ ಮಲ್ಲಾಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಶಾಂತಾ ಬಾಂದೇಕರ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಹುಟ್ಟು ಬೆಳವಣಿಗೆಯ ಬಗ್ಗೆ ಹೇಳುವುದರ ಜೊತೆಗೆ, ಪ್ರತಿಯೊಬ್ಬ ವಿದ್ಯಾರ್ಥಿಯು ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಒಳ್ಳೆಯ ರೀತಿಯಲ್ಲಿ ಓದಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿಕೊಳ್ಳಿ ಎಂದು ಕರೆ ನೀಡಿದರು.
ಮಾಜಿ ಸಚಿವ ಪ್ರಭಾಕರ ರಾಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರದ ಮಹತ್ವ ತಿಳಿದುಕೊಂಡು ಒಳ್ಳೆಯ ಅನುಭವವನ್ನು ಪಡೆದುಕೊಳ್ಳಬೇಕು. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದರು.
ದೇವಳಮಕ್ಕಿ ಕ್ಷೇತ್ರದ ತಾಪಂ ಸದಸ್ಯೆ ಸರೋಜಿನಿ ಗೌಡ ಹಾಗೂ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿಯ ಸದಸ್ಯ ಪಾಂಡುರಂಗ ಎಸ್. ನಾಯ್ಕ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ಪ್ರಾಚಾರ್ಯರಾದ ಪ್ರಕಾಶ ರಾಣೆ ಸ್ವಾಗತಿಸಿದರು. ಎನ್ನೆಸ್ಸೆಸ್ಸ್ ಕಾರ್ಯಕ್ರಮಾಧಿಕಾರಿ ಬಸವರಾಜ್ ನಡಗೇರಿ ನಿರೂಪಣೆ ಮಾಡಿದರು. ಕವಿತಾ, ಸ್ನೇಹಾ, ಪ್ರಶಿಲಾ, ಸುವರ್ಣಾ ಭಾವೈಕ್ಯ ಗೀತೆ ಹಾಡಿದರು. ಸುವರ್ಣಾ ಬಿ. ಗೌಡ ವಂದಿಸಿದರು. ಚಂಪಾ.ಎಮ್. ಉಳ್ವೇಕರ, ಕೆ.ಆರ್. ಕಾಂಬಳೆ, ಉದಯ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.