ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ: ಡಾ. ಸವಿತಾ ಮಹೇಶ್
ಚಿಕ್ಕಮಗಳೂರು, ಅ.17: ಪೌಷ್ಟಿಕಾಂಶವುಳ್ಳ ತರಕಾರಿ, ಧಾನ್ಯ, ಸೊಪ್ಪು, ಹಣ್ಣುಹಂಪಲು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹರಿಹರ ಸರಕಾರಿ ಆಸ್ಪತ್ರೆಯ ಸ್ತ್ರೀ ರೋಗತಜ್ಞೆ ಡಾ. ಸವಿತಾ ಮಹೇಶ್ ಅಭಿಪ್ರಾಯಿಸಿದರು.
ಅಕ್ಕಮಹಾದೇವಿ ಮಹಿಳಾ ಸಂಘದ ಶರಣೆಕಾಳವ್ವೆ ತಂಡ ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವ ಆರೋಗ್ಯದಿನ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ ಇದೆ. ರಾಸಾಯನಿಕಗಳನ್ನು ಹೆಚ್ಚಾಗಿ ಬಳಸಿರುವುದರಿಂದ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮ ಕಂಡುಬರುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆದಿರುವ ಹಿನ್ನೆಲೆಯಲ್ಲಿ ಈಗ ಸಾಂಕ್ರಮಿಕರೋಗಗಳು ಕಡಿಮೆಯಾಗಿದ್ದರೂ ಅಸಾಂಕ್ರಮಿಕ ರೋಗಗಳಾದ ಡೆಂಗ್, ಮಧುಮೇಹ, ರಕ್ತದೊತ್ತಡ, ಮಾನಸಿಕ ಖಿನ್ನತೆ ಸೇರಿದಂತೆ ಕಂಡು ಕೇಳರಿಯದ ಹೊಸರೋಗಗಳು ವ್ಯಾಪಿಸುತ್ತಿದೆ ಎಂದು ತಿಳಿಸಿದರು.
ದಾನಗಳಲ್ಲಿ ರಕ್ತದಾನ ಶ್ರೇಷ್ಠ. ರಕ್ತವನ್ನು ಕೃತಕವಾಗಿ ತಯಾರಿಸಲಾಗದು. ಸಕಾಲಿಕವಾಗಿ ರಕ್ತ ನೀಡುವುದರಿಂದ ಜೀವ ಉಳಿಸಬಹುದು. 45 ಕೆಜಿಗಿಂತ ಅಧಿಕ ತೂಕದ ಮಹಿಳೆಯರು ರಕ್ತದಾನ ಮಾಡಬಹುದೆಂದರು.
ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಬ್ಯಾಗದಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ಕಾಳವ್ವೆ ತಂಡದ ವತಿಯಿಂದ ಶುದ್ಧ ಕುಡಿಯುವ ನೀರಿನಘಟಕ ಕೊಡುಗೆ ನೀಡಲಾಯಿತು. ತಂಡದ ಮುಖಂಡೆ ಚಂದ್ರಮತಿ ಅಣ್ಣೇಗೌಡ ಪ್ರಾಸ್ತಾವಿಸಿದರು. ತಂಡದ ಜಾನಪದ ಕೋಲಾಟ, ಆಟೋಟ ಹಾಗೂ ರಂಗೋಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್, ಚಂದ್ರಮತಿ, ಕಾರ್ಯದರ್ಶಿ ಹೇಮಲತಾ, ಖಜಾಂಚಿ ಯಮುನಾ ಸಿ.ಶೆಟ್ಟಿ, ಸಹಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ರೇಖಾ ಉಮಾಶಂಕರ್, ಪುಷ್ಪಾ, ರತ್ನಾ, ರಮ್ಯಾ, ದಾಕ್ಷಾಯಣಿ ಮತ್ತಿತರರಿದ್ದರು. ಅಕ್ಕ ಮಹಾದೇವಿ ಮಹಿಳಾ ಸಂಘದ ಸದಸ್ಯರಾದ ಅನುಸೂಯ ವಿಶ್ವನಾಥ ಸ್ವಾಗತಿಸಿದರು. ಹೇಮಾವತಿದೇವರಾಜ್ ನಿರೂಪಿಸಿ, ಸುಮಾ ಕಿಶನ್ ವಂದಿಸಿದರು.