×
Ad

ಮಹಿಳೆಯರ ಆತ್ಮಹತ್ಯೆ ಹೆಚ್ಚುತ್ತಿರುವುದು ದುರ್ದೈವ: ನ್ಯಾಯಾಧೀಶ ಡಿ. ಕಂಬೇಗೌಡ

Update: 2016-10-17 22:08 IST

ಚಿಕ್ಕಮಗಳೂರು, ಅ.17: ಕಾನೂನಿನ ಅರಿವು ಹೊಂದಿದ್ದರೂ ತಪ್ಪು-ಸರಿ ಅನ್ನುವುದು ತಿಳಿದಿದ್ದರೂ ಸಹ ಅಪರಾಧಗಳು ಹೆಚ್ಚುತ್ತಲೇ ಇವೆ. ಮಹಿಳೆಯರ ಆತ್ಮಹತ್ಯೆಗಳು ಎಗ್ಗಿಲ್ಲದೇ ನಡೆಯುತ್ತಿರುವುದು ದುರ್ದೈವ ಎಂದು ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಕಂಬೇಗೌಡ ಹೇಳಿದರು.

ಅವರು ಕಾನೂನು ಸಾಕ್ಷರತಾ ರಥ ಪ್ರವಾಸದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರಕ್ಷಕ ಇಲಾಖೆ, ವಾರ್ತಾ ಇಲಾಖೆ ವತಿಯಿಂದ ಜರಗಿದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಆತ್ಮಹತ್ಯೆಗಳು, ಒತ್ತಡಗಳಿಂದ ಸಂಭವಿಸುತ್ತಿವೆ, ವಿದ್ಯಾರ್ಥಿಗಳಿಗೆ ಸದಭಿರುಚಿಯ ಆಸಕ್ತಿಗಳು ಬರುವಂತೆ ಮಾಡುವ ಮಾರ್ಗದರ್ಶನ ಇಂದಿನ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು.

 ಹದಿಹರೆಯದ ಹೆಣ್ಣುಮಕ್ಕಳು ಪ್ರೇಮಪಾಷಕ್ಕೆ ಸಿಲುಕಿ, ನಲುಗಿ, ದ್ವೇಷ ರೂಪುಗೊಂಡು ಬದುಕನ್ನು ಕಳೆದುಕೊಳ್ಳುವ ಪರಿಸ್ಥಿತಿ ಸಮಾಜದಲ್ಲಿ ಕಾಣುತ್ತಿದ್ದೇವೆ. ಆತ್ಮಹತ್ಯೆ ಮಹಾ ಅಪರಾಧವಾಗಿದ್ದು, ಸಂವಿಧಾನ ಜೀವಿಸುವ ಹಕ್ಕನ್ನು ನೀಡಿದೆ. ಶ್ರೀಸಾಮಾನ್ಯರಿಗಿಂತ ಉನ್ನತ ಹುದ್ದೆಯ ಐಎಎಸ್, ಐಪಿಎಸ್, ವೈದ್ಯರಾದಿಯಾಗಿ ಆತ್ಯಹತ್ಯೆಗೆ ಮುಂದಾಗುತ್ತಿರುವುದು ಶೋಚನೀಯ. ಕೆಲಸದ ಒತ್ತಡವನ್ನು ಮಾನಸಿಕವಾಗಿ ನಿಭಾಯಿಸುವುದು ಒಳಿತು ಎಂದರು. ಸರಕಾರಿ ಅಭಿಯೋಜಕಿ ಕಲ್ಪನಾ ಕೆ.ಎಸ್.ಮಾತನಾಡಿ, ಪ್ರತಿಭೆೆಗೆ ಪ್ರೇರಣೆ ನೀಡಲು ಮಹಿಳೆಗೆ ಕಾನೂನು ಕಾಯ್ದೆಗಳನ್ನು ರೂಪಿಸಿದೆ. ಮಹಿಳೆಯ ಸ್ಥಾನ, ಜವಾಬ್ದಾರಿ, ಗೌರವಯುತ ನಡವಳಿಕೆ ಬಗ್ಗೆ ವಿವರಿಸಿದರು. ಸಮಾರಂಭದಲ್ಲಿ ಚಿಕ್ಕಮಗಳೂರು ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜಯ್ಯ ಒಡೆಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಕಾನೂನಿನ ಅರಿವು ಅತ್ಯವಶ್ಯಕವಾಗಿದೆ. ಜೊತೆಜೊತೆಯಲ್ಲಿ ಶೈಕ್ಷಣಿಕ ಅರಿವನ್ನು ಹೊಂದಿ ಸಮಾಜ ಸಹೋದರ ಸಹೋದರಿ ಸಂಬಂಧಿಯೊಂದಿಗೆ ಕೌಟುಂಬಿಕ ಸಹಬಾಳ್ವೆ ಜೀವನವನ್ನು ಹೊಂದಿ ಶೋಷಣೆ ರಹಿತ ಸಮಾಜಮುಖಿಯಾಗಿ ಪಾಲ್ಗೊಂಡು ಕಾನೂನು ಕೊಡುಮಾಡುವ ತನ್ನ ಹಕ್ಕನ್ನು ಬಳಸಿಕೊಂಡು, ಕಾನೂನಿನ ರಕ್ಷಣೆಯನ್ನು ಹೊಂದಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ವಕೀಲೆ ಎಚ್.ಎನ್.ಅರುಂಧತಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ನಿಯಮದ ಬಗ್ಗೆ ಮಾತನಾಡಿ, ಮಹಿಳೆಯರು ಉಚಿತ ಕಾನೂನು ರಕ್ಷಣೆಯನ್ನು ಪಡೆದುಕೊಂಡು ಸಮಾಜದ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ಹೊಂದಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವ ಸದನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್.ಆರ್.ಮಹೇಶ್, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಜೆ. ಉಷಾ, ಮೇಲ್ವಿಚಾರಕಿಯರಾದ ಗೌರಮ್ಮ, ವಿಜಯಕುಮಾರಿ ಉಪಸ್ಥಿತರಿದ್ದರು. ಲೀಲಾ ಸ್ವಾಗತಿಸಿ, ವಸಂತ್‌ಕುಮಾರಿ ವಂದಿಸಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಶ್ರೀನಿವಾಸ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News