ಅಭಿವೃದ್ಧಿ ಕಾರ್ಯಗಳು ಜನಪ್ರತಿನಿಧಿಗಳ ಗಮನಕ್ಕೆ ಬರಲಿ: ರತನ್
ಮೂಡಿಗೆರೆ, ಅ.17: ತಾಲೂಕಿನಲ್ಲಿ ಯಾವುದೇ ಕಾಮಗಾರಿಗಳು ಸೇರಿದಂತೆ ಮುಖ್ಯವಾಗಿ ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರದೇ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಬಾರದು ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ತಿಳಿಸಿದರು.
ಅವರು ಸೋಮವಾರ ತಾಪಂ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರ ಪರಿಹಾರಕ್ಕೆ ಬಂದ ಅನುದಾನದಲ್ಲಿ ಮೂರ್ನಾಲ್ಕು ತಿಂಗಳು ಕಳೆದರೂ ಪಂಪ್‌ಸೆಟ್ ಅಳವಡಿಸಿಲ್ಲ. ಶೀಘ್ರದಲ್ಲೇ ಕಾಮಗಾರಿ ಅಂತ್ಯಗೊಳಿಸಿ ನೀರು ಒದಗಿಸಿಕೊಡಬೇಕು. ಶಿರಾಡಿ ಘಾಟಿ ಸದ್ಯದಲ್ಲೆ ಬಂದ್ ಆಗುವುದರಿಂದ ಈ ಕಡೆ ಹೆಚ್ಚು ವಾಹನಗಳ ಸಂಚಾರವಾಗುವುದರಿಂದ ಅಪಘಾತಗಳು ಸಂಭವಿಸಬಹುದು. ಆದ್ದರಿಂದ 108 ವಾಹನದ ಸೇವೆ ನಿರಂತರವಾಗಿ ಸಿಗುವಂತೆ ನಿಗಾವಹಿಸಬೇಕು ಎಂದರು.
ಎನ್‌ಆರ್‌ಐಜಿಯಲ್ಲಿ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯ ಎಲ್ಲ ಕ್ರೀಡಾಂಗಣದಲ್ಲಿ ಖೋ ಖೋ, ವಾಲಿಬಾಲ್, ಕಬಡ್ಡಿ ಕೋರ್ಟ್ ನಿರ್ಮಿಸಬೇಕು. ಅಲ್ಲದೆ ಸ್ಮಶಾನ ನಿರ್ಮಾಣವಾಗಬೇಕು. ಯಾವುದೇ ಕಾಂಕ್ರಿಟ್ ಕಾಮಗಾರಿ ನಡೆಸಿದ ಬಳಿಕ ರಸ್ತೆ ಬದಿ ಮಣ್ಣು ಹಾಕಬೇಕೆಂಬ ನಿಯಮವಿದ್ದರೂ ಮಣ್ಣು ಹಾಕುವ ಕೆಲಸ ಮಾಡಿಲ್ಲ. ಅದನ್ನು ಕೂಡಲೇ ಮಾಡಬೇಕು. ಹಣ ಇಲ್ಲದಿದ್ದರೆ ಸಂಬಂಧಿಸಿದ ಇಂಜಿನಿಯರ್ ವೇತನದಲ್ಲಿ ಮಾಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಹಿಂದೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಾರಾಯಣಗುರು, ವಾಲ್ಮೀಕಿ, ದೇವರಾಜ ಅರಸ್ ಜನ್ಮದಿನಾಚರಣೆ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಾಗಿಲ್ಲ. ಅಧಿಕಾರಿಗಳು ಹಾಜರಾಗದಿದ್ದರೆ ಸರಕಾರದ ಕಾರ್ಯಕ್ರಮ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳಿಗೆ ಅಗೌರವ ತೋರುವುದು ಮತ್ತೆ ಮರುಕಳಿಸಿದರೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.
ಆಹಾರ ಇಲಾಖೆಗೆ ತಾನು ಖುದ್ದು ಹೋದಾಗ ಅಲ್ಲಿದ್ದ ಅಧಿಕಾರಿ ಮನಸ್ಸಿಗೆ ಬಂದಂತೆ ಮಾತನಾಡಿದ ಹಿನ್ನಲೆಯಲ್ಲಿ ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಆಹಾರ ಇಲಾಖೆ ಅಧಿಕಾರಿ ಉಮೇಶ್‌ರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಿಂದ ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯ ಬಾರದಂತೆ ನಿಗಾ ವಹಿಸಬೇಕೆಂದು ಎಚ್ಚರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಇಒ ಎಂ.ಎನ್.ಗುರುದತ್, ತಹಶೀಲ್ದಾರ್ ಡಿ.ನಾಗೇಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.